ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ರಾಜಕೀಯದಿಂದ ದೂರವಿಟ್ಟು, ಮನೆಗೆ ಕಳಿಸೋದೆ ನಮ್ಮ ಗುರಿ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗುಡುಗಿದರು.
ಚಿಂಚೊಳಿ ಪಟ್ಟಣದ ಪೊಲೀಸ್ ಮೈದಾನದಲ್ಲಿ ಬೀದರ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದರು. ಪ್ರಿಯಾಂಕ್ ಖರ್ಗೆ 40 ವರ್ಷಗಳಿಂದ ಕೋಳಿ ಸಮುದಾಯದವರನ್ನು ಬಳಸಿಕೊಂಡು ರಾಜಕೀಯವಾಗಿ ಮೊಸ ಮಾಡಿದ್ದಾರೆ. ಹೀಗಾಗಿ ಅವರನ್ನು ಮನೆಗೆ ಕಳಿಸುವುದೇ ನಮ್ಮ ಗುರಿ ಎಂದು ಚಿಂಚನಸೂರ್ ವಾಗ್ದಾಳಿ ಮಾಡಿದರು.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ ಹಾಗೂ ಚಿಂಚನಸೂರು ಜೋಡೆತ್ತುಗಳು. ಡಾ. ಉಮೇಶ ಜಾಧವ ಅವರು ರಾಮ ಇದ್ದಂಗೆ. ನಾವೇ ಖರ್ಗೆ ಜತೆ ಇಲ್ಲ ಅಂದ್ಮೇಲೆ ಖರ್ಗೆ ಕುಟುಂಬ ರಾಜಕಾರಣ ಅಂತ್ಯ ಸಮೀಪವಾಗಿದೆ ಎಂಬರ್ಥ ಎಂದು ಛೇಡಿಸಿದರು.
ರಾಜ್ಯದಲ್ಲಿ ಜೆಡಿಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಈ ಮೈತ್ರಿ ಒತ್ತಾಯದ ಮದುವೆಯಂತಿದೆ. ಎರಡು ಪಕ್ಷಗಳ ನಡುವೆ ಕೆಲವೇ ದಿನಗಳಲ್ಲಿ ವಿಚ್ಛೇದನೆ ಆಗುತ್ತೆ. ರಾಜ್ಯದಲ್ಲಿ ಮತ್ತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಎಂದರು.
ಕೋಳಿ ಸಮಾಜವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸುತ್ತೇನೆ. ಆನಂತರವೇ ಸಾಯುತ್ತೇನೆ. ಯಮರಾಯ ಬಂದರೂ ಸ್ವಲ್ಪ ತಾಳು, ಕೋಳಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಿ ಬರುತ್ತೇವೆ ಎಂದು ಕೇಳಿಕೊಳ್ತೀನಿ ಎಂದು ಹೇಳಿದರು.
ವೇದಿಕೆಯಲ್ಲಿ ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ಸಿಂಗ್ ಚೌಹಾಣ್, ಸಂಸದ ಭಗವಂತ ಖೂಬಾ, ಡಾ.ಉಮೇಶ ಜಾಧವ್, ಸುನೀಲ ವಲ್ಯಾಪೂರೆ, ರಾಜಕುಮಾರ್ ಪಾಟಿಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.