ಕಲಬುರಗಿ: ನಗರದದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ತಮಗೆ ತಿನ್ನಲು ಆಹಾರವಿಲ್ಲ. ದಯವಿಟ್ಟು ಸಹಾಯಕ್ಕೆ ಬನ್ನಿ ಎಂದು ಅಂಗಲಾಚಿದ್ದೇ ತಡ ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಡಳಿತ ಅಲೆಮಾರಿಗಳ ಗುಡಿಸಲಿಗೆ ಹೋಗಿ ಆಹಾರ ಪದಾರ್ಥ ಸಾಮಗ್ರಿ ಕಿಟ್‍ಗಳನ್ನು ವಿತರಿಸಿದೆ.
ಬಸ್ ನಿಲ್ದಾಣದ ಬಳಿ ಕಣ್ಣಿ ಮಾರ್ಕೆಟ್ ಹೊಂದಿಕೊಂಡಂತೆ ಜೋಪಡಿ, ಟೆಂಟ್ ಹಾಕಿಕೊಂಡಿರುವ ಈ ನಿವಾಸಿಗಳು ಸಣ್ಣ-ಪುಟ್ಟ ವ್ಯಾಪಾರ ಮಾಡಿಕೊಂಡಿದ್ದಾರೆ. ಲಾಕ್ಡೌನ್ ಪರಿಣಾಮ ಕೈಯಲ್ಲಿ ಕಾಸಿಲ್ಲದೆ ಊಟಕ್ಕೆ ಪರದಾಡುವಂತಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಭಾನುವಾರ ಮಧ್ಯಾಹ್ನ ಅಲ್ಲಿನ ಕುಟುಂಬಗಳು ಬೇಡಿಕೊಂಡರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಈ ಮಾಹಿತಿ ಮಧ್ಯಾಹ್ನ 3.30 ಗಂಟೆಗೆ ದೊರೆತ ಕೂಡಲೇ ಇದನ್ನು ಜಿಲ್ಲಾಡಳಿತದ ಆಹಾರ ಸಮಿತಿ ಮುಖ್ಯಸ್ಥರಾದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜಂಟಿ ನಿರ್ದೇಶಕಿ ಪ್ರವೀಣ ಪ್ರಿಯಾ ಅವರಿಗೆ ಮಾಹಿತಿ ನೀಡಲಾಯಿತು. ಸಮಕ್ಷಮ ಕಣ್ಣಿ ಮಾರ್ಕೆಟ್ ಪ್ರದೇಶದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಎಲ್ಲಾ 31 ಕುಟುಂಬಗಳಿಗೆ ಅಡುಗೆಗೆ ಬೇಕಾಗಿರುವ ಅಕ್ಕಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಖಾರದ ಪುಡಿ, ಉಪ್ಪು ಹೀಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ಪ್ರತ್ಯೇಕವಾಗಿ ವಿತರಿಸಿದರು.