ಕಲಬುರಗಿ : ಆಜಾನ್ ವಿರುದ್ಧ ಶ್ರೀರಾಮ ಸೇನೆ ಕರೆ ನೀಡಿದ ಸುಪ್ರಭಾತ ಅಭಿಯಾನಕ್ಕೆ ವಿರೋಧ ವ್ಯಕ್ತವಾಗಿದೆ. ಮುಸ್ಲಿಂ ಸಮುದಾಯ ಜತೆಗೆ ದಲಿತ ಸಮುದಾಯದ ಜೆಡಿಎಸ್ ಕಾರ್ಯಕರ್ತರು ಮಸೀದಿಗೆ ಕಾವಲಾಗಿ ನಿಂತಿದ್ದಾರೆ. ಈ ಮಧ್ಯೆಯೂ ಹನುಮಾನ್ ಚಾಲೀಸಾ ಪಠಣ ಮಾಡುತ್ತಾ ತೆರಳುತ್ತಿರುವ ಶ್ರೀರಾಮ ಸೇನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ನಸುಕಿನ ಜಾವ ಸುಪ್ರಭಾತ ಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರು, ಮಧ್ಯಾಹ್ನ ಹನುಮಾನ್ ಚಾಲೀಸಾ ಪಠಣಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಜಗತ್ ವೃತ್ತದಿಂದ ಸೂಪರ್ ಮಾರ್ಕೆಟ್ವರೆಗೆ ಪಾದಯಾತ್ರೆ ಮೂಲಕ ತೆರಳಿ ಅಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾಗಿದ್ದರು.
ಆದ್ರೆ, ಮುಸ್ಲಿಂ ಸಮುದಾಯಕ್ಕೆ ದಲಿತ ಸಂಘಟನೆಗಳು, ಜೆಡಿಎಸ್ ಕಾರ್ಯಕರ್ತರು ಬೆನ್ನೆಲುಬಾಗಿ ನಿಂತಿದ್ದಾರೆ. ನಾವು ಕಾವಲಿದ್ದೇವೆ, ಯಾರು ಬರ್ತಿರೋ ಬನ್ನಿ ಎಂದು ದಲಿತ ಸೇನೆ ಕಾರ್ಯಕರ್ತರು ಮಸೀದಿ ಬಳಿ ಕಾವಲು ಕುಳಿತಿದ್ದಾರೆ. ಇನ್ನೊಂದೆಡೆ, ಹನುಮಾನ್ ಚಾಲೀಸಾ ಪಠಣ ಮಾಡುತ್ತಾ ಹೊರಟ 20ಕ್ಕೂ ಅಧಿಕ ಜನ ಶ್ರೀರಾಮ ಸೇನೆ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದ ಬಹುತೇಕ ಕಡೆ ಅಂದ್ರೆ ಮಸೀದಿ ಮತ್ತು ಹನುಮಾನ್ ದೇವಸ್ಥಾನದ ಸುತ್ತ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಆಜಾನ್-ಭಜನೆ ಸಂಘರ್ಷ: ಸಿಎಂ ಭೇಟಿ ಮಾಡಿದ ಕಾಂಗ್ರೆಸ್ ಮುಸ್ಲಿಂ ಶಾಸಕರ ನಿಯೋಗ