ಕಲಬುರಗಿ: ಲೋಕಸಭಾ ಚುನಾವಣೆ ಸಮರಕ್ಕೆ ವಿರಾಮ ಸಿಗುತ್ತಿದ್ದಂತೆ ಇದೀಗ ಎಲ್ಲ ರಾಜಕೀಯ ನಾಯಕರ ಚಿತ್ತ ಚಿಂಚೋಳಿ ಉಪಚುನಾವಣೆಯತ್ತ ಹರಿದಿದೆ. ಯಾವ್ಯಾವ ಪಕ್ಷಗಳಿಂದ ಯಾರೆಲ್ಲಾ ಕಣಕ್ಕಿಳಿಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಅಭ್ಯರ್ಥಿಗಳ ಆಯ್ಕೆಗಾಗಿ ರಾಜಕೀಯ ಪಕ್ಷಗಳು ಭಾರಿ ಚರ್ಚೆ ನಡೆಸುತ್ತಿವೆ. ಈ ಚುನಾವಣೆಯೂ ಪ್ರತಿಷ್ಠೆಯ ಕಣವಾಗಿರುವುದುರಿಂದ ಬಲಾಡ್ಯರನ್ನೇ ಅಖಾಡಕ್ಕಿಳಿಸಲು ಎಲ್ಲಿಲ್ಲದ ಲೆಕ್ಕಾಚಾರದಲ್ಲಿ ತೊಡಗಿವೆ.
ಇನ್ನು ಬಿಜೆಪಿಯಿಂದ ಉಮೇಶ ಜಾಧವ ಸಹೋದರ ರಾಮಚಂದ್ರ ಜಾಧವ ಕಣಕ್ಕಿಳಿಯುವ ಎಲ್ಲ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅಭ್ಯರ್ಥಿಗಳ ನಡುವೆ ಟಿಕೆಟ್ಗಾಗಿ ಪೈಪೊಟಿ ಏರ್ಪಟ್ಟಿದೆ.
ಬಂಜಾರ ಸಮಾಜಕ್ಕೆ 'ಕೈ' ಮಣೆ
ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿಂಚೋಳಿ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾದವ್ ಪಕ್ಷಕ್ಕೆ ಗುಡ್ಬೈ ಹೇಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಕಲಬುರುಗಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕಾರಣದ ಚಿಂಚೋಳಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಚಿಂಚೋಳಿ ಮೀಸಲು ಕ್ಷೇತ್ರವಾದಾಗಿನಿಂದ ಕಾಂಗ್ರೆಸ್ ಬಂಜಾರ ಸಮುದಾಯದ ನಾಯಕರಿಗೆ ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿಯೂ ಬಂಜಾರ ಸಮೂದಾಯದ ನಾಯಕರಿಗೆ ಟಿಕೆಟ್ ಸಿಗಲಿದೆ ಅನ್ನೋದು ಪಕ್ಕಾ ಆಗಿದೆ. ಇದು ಬಂಜಾರ ನಾಯಕರಲ್ಲಿ ಆಸೆ ಚಿಗುರೊಡೆಯುವಂತೆ ಮಾಡಿದೆ.
ಬಾಬುರಾವ್ ಚೌಹಾನ್
ಸದ್ಯ ಬಂಜಾರದ ಸಮುದಾಯದಲ್ಲಿ ಪ್ರಮುಖರು ಎಂದು ಗುರ್ತಿಸಿಕೊಂಡಿರುವ ಮಾಜಿ ಸಚಿವ ಬಾಬುರಾವ್ ಚೌಹಾನ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಥೋಡ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲಿದ್ದಾರೆ. ಮಾಜಿ ಸಚಿವ ಬಾಬುರಾವ್ ಚೌಹಾನ್ ಈ ಹಿಂದೆ ಕಾಂಗ್ರೆಸ್ ಶಾಸಕರಾಗಿ, ಸಮಾಜ ಕಲ್ಯಾಣ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಎರಡನೇ ಬಾರಿ ಚಿಂಚೋಳಿ ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ಸಿಗದ ಹಿನ್ನೆಲೆ ಖರ್ಗೆ ವಿರುದ್ಧ ಮುನಿಸಿಕೊಂಡು ಬಿಜೆಪಿ ಪಕ್ಷ ಸೇರಿದ್ದರು. ಆದರೆ ಈ ಬಾರಿ ಕಲಬುರಗಿ ಲೋಕಸಭೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡು ಮತ್ತೆ ಕಾಂಗ್ರೆಸ್ ವಾಪಸ್ಸಾದ್ದಾರೆ. ಚಿಂಚೋಳಿ ಉಪ ಚುನಾವಣೆಯಲ್ಲಿ ಮತ್ತೆ ತಮಗೆ ಸ್ಪರ್ಧೆಗೆ ಅವಕಾಶ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ.
ಸುಭಾಷ್ ರಾಠೋಡ
ಇನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ ಕೂಡಾ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿ. ಬಿಜೆಪಿಯಲ್ಲಿದ್ದ ಇವರು ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದಿಂದ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಸೇರಿದ್ದಾರೆ. ಚಿಂಚೋಳಿ ಕ್ಷೇತ್ರ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ ರಾಠೋಡ, ತಾಂಡಾಗಳನ್ನು ಸುತ್ತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ,ತಾಂಡಾಗಳಲ್ಲಿ ಮಕ್ಕಳ ಮಾರಾಟ ಮಾಡುತ್ತಿದ್ದಾ ಅವರಗೆ ಅರಿವು ಮೂಡಿಸಿದ್ದೇನೆ. ಈ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಸದ್ಯ ಖರ್ಗೆ ಪರಮಾಪ್ತರೂ ಆಗಿರುವುದರಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ರೇವುನಾಯಕ ಬೆಳಮಗಿ
ಈ ಮಧ್ಯೆ ಮಾಜಿ ಸಚಿವ ರೇವುನಾಯಕ ಬೆಳಮಗಿ ಕೂಡ ಟಿಕೆಟ್ ರೇಸ್ನಲ್ಲಿದ್ದಾರೆ. ಜೆಡಿಎಸ್ ಪಕ್ಷದಲ್ಲಿರುವ ಬೆಳಮಗಿ, ಸಮ್ಮಿಶ್ರ ಸರ್ಕಾರ ಇರೋದ್ರಿಂದ ಟಿಕೆಟ್ ಸಿಗಬಹುದು ಎಂದು ಆಸೆಗಣ್ಣಿನಿಂದ ಕಾಯ್ತಿದ್ದಾರೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರೂ ಆಗಿರುವುದುರಿಂದ ನಿರೀಕ್ಷೆ ಹೆಚ್ಚಿದೆ. ಸಂಭಾವಿತ ರಾಜಕಾರಣಿ ಎಂಬ ಕಾರಣಕ್ಕೆ ಬೆಳಮಗಿ ಅವರನ್ನು ಬಿಜೆಪಿ ಕಲಬುರಗಿ ವಿಧಾನಸಭೆಗೆ ಟಿಕೆಟ್ ನೀಡಿ ಗೆಲ್ಲಿಸುವ ಮೂಲಕ ಸಚಿವರನ್ನಾಗಿಯೂ ಮಾಡಿತ್ತು. ಅಲ್ಲದೆ, ಎರಡು ಬಾರಿ ಖರ್ಗೆ ವಿರುದ್ಧ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿಲು ಸೋಲುಂಡಿದ್ದಾರೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಈ ಬಾರಿ ಚಿಂಚೋಳಿಯಿಂದ ಟಿಕೆಟ್ ಸಿಗುವ ಭರವಸೆ ಸಿಕ್ಕರೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಾರೆ ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಾಬುರಾವ್ ಚೌಹಾನ್ ಹಾಗೂ ಸುಭಾಷ ರಾಥೋಡ್ ಮಧ್ಯೆ ಕಾಂಗ್ರೆಸ್ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದೆ. ಏನೆಲ್ಲಾ ಲೆಕ್ಕಾಚಾರ ಮಾಡಿ ಕಾಂಗ್ರೆಸ್ ಯಾರಿಗೆ ಟಿಕೆಟ್ ಕೊಡುತ್ತೆ ಎಂಬುದಂತೂ ಸಾಕಷ್ಟು ಕುತೂಹಲ ಮೂಡಿಸಿದೆ.