ಕಲಬುರಗಿ: ಆರಾಧ್ಯ ದೈವ ಶರಣಬಸವೇಶ್ವರ ಹುಟ್ಟಿದ ದಿನದ ಪ್ರಯುಕ್ತ ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ಶರಣಬಸವೇಶ್ವರರ ಗದ್ದುಗೆ ಆವರಣದಲ್ಲಿ ಮಹಾತ್ಮ ಶರಣಬಸವೇಶ್ವರರ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದರು.
ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ನೇತೃತ್ವದಲ್ಲಿ ಸಂಭ್ರಮ ಸಡಗರದಿಂದ ತೊಟ್ಟಿಲು ಕಾರ್ಯಕ್ರಮ ಜರುಗಿತು. ದಾಕ್ಷಾಯಿಣಿ ಅವ್ವಾಜಿಯವರ ಸಾನಿಧ್ಯದಲ್ಲಿ ಭಕ್ತ ಸಮೂಹದ ಜಯ ಘೋಷಗಳ ಮಧ್ಯೆ ಶರಣೆಯರು ಜೋಗುಳ ಪದ ಹಾಡುವ ಮೂಲಕ ಭಕ್ತರು ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಿದರು.
ಶರಣಬಸವೇಶ್ವರರು ತಮ್ಮ ಹೊಲದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸಿದ ಮತ್ತು ಹಸಿದ ಪ್ರಾಣಿಗಳಿಗೆ ದವಸ ಧಾನ್ಯ ಹಾಕಿ ಮಾನವೀಯ ಪ್ರೀತಿ ತೋರಿಸಿದ ಪ್ರಸಂಗವನ್ನು ರೈತರು ನೆನೆದು, ತಮ್ಮ ಹಾಡಿನಲ್ಲಿ ವ್ಯಕ್ತಪಡಿಸಿ ಸಂಭ್ರಮಿಸಿದರು. ಮಕ್ಕಳು, ರೈತರು ಸೇರಿದಂತೆ ಅಪಾರ ಭಕ್ತ ಸಮೂಹ ತೊಟ್ಟಿಲು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.