ಕಲಬುರಗಿ: ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರದಲ್ಲಿ ಹಾಳಾಗಿರುವ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ರಸ್ತೆ ಗುಂಡಿಯಲ್ಲಿ ಪೇಪರ್ ದೋಣಿ ಬಿಟ್ಟು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ ಚವ್ಹಾಣ ನೇತೃತ್ವದಲ್ಲಿ ಕಾರ್ಯಕರ್ತರು ಗುಂಡಿ ಬಿದ್ದ ರಸ್ತೆಯಲ್ಲಿ ಖರ್ಗೆ ಭಾವಚಿತ್ರ ಇರುವ ದೋಣಿ ತೇಲಿ ಬಿಟ್ಟು, ಸಸಿ ನೆಟ್ಟರು ಅಲ್ಲದೆ, ಮೀನು ಹಿಡಿಯುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.
ಚಿತ್ತಾಪೂರ- ದಂಡೋತಿ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ಮಾಡ್ತೀನಿ ಅಂತ ಹೇಳುವ ಶಾಸಕರು ಬೆಂಗಳೂರಿನ ಸದಾಶಿವನಗರದಲ್ಲಿ ಕುಳಿತುಕೊಂಡಿದ್ದಾರೆ. ಅಲ್ಲಿಂದಲೇ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರಗಳ ಕುರಿತು ಸುದ್ದಿಗೋಷ್ಟಿ ಮಾಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಅವರಿಗೆ ಚಿತ್ತಾಪುರ ಕ್ಷೇತ್ರದ ಜನರ ಸಂಕಷ್ಟದ ಬಗ್ಗೆ ಅರಿವಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಸರ್ಕಾರದ ನಿರ್ಧಾರ ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಪ್ರಿಯಾಂಕ್ ಖರ್ಗೆ
ಪ್ರತಿಭಟನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, ರಸ್ತೆ ಗುಂಡಿಯಲ್ಲಿ ದೋಣಿ ಬಿಟ್ಟು, ಮೀನು ಹಿಡಿದು, ಸಸಿ ನೆಟ್ಟು ಪ್ರತಿಭಟನೆ ಮಾಡಿ ಜನ ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ. ಇದು ಅತಿವೃಷ್ಟಿಯಿಂದ ಆಗಿರುವ ಅನಾಹುತ. ಮೂರು ವರ್ಷದಿಂದ ಅಭಿವೃದ್ಧಿಗೆ ಹಣ ಕೊಡದೆ ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ತಿಳಿಸಿದ್ದಾರೆ.