ಸೇಡಂ: ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಕ್ರಂಖಾನ್ ವಿರುದ್ಧ ತೊಡೆ ತಟ್ಟಿದ್ದ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಕಡೆಗೂ ಪಟ್ಟಣ ಪ್ರವೇಶಕ್ಕೆ ಯತ್ನಿಸಿದ್ದು, ಪೊಲೀಸರು ಅವರನ್ನು 7 ಕಿ.ಮೀ. ದೂರದಲ್ಲೇ ತಡೆದಿದ್ದಾರೆ.
ಶ್ರೀರಾಮಸೇನೆಯ ಮುಖಂಡ ಗಂಗಾಧರ ಕುಲಕರ್ಣಿ ಹುಕ್ಕೇರಿ ಅವರ ವಿಡಿಯೋ ಹೇಳಿಕೆಯಂತೆ ಆಂದೋಲಾ ಶ್ರೀಗಳೊಂದಿಗೆ ಮುಕ್ರಂಖಾನ್ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ಕರೆ ನೀಡಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ 5 ಕಿ.ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಆಂದೋಲಾ ಶ್ರೀಗಳನ್ನು ನೀಲಹಳ್ಳಿ ಗ್ರಾಮದ ಬಳಿಯೇ ತಡೆಯಲಾಗಿತ್ತು. ಈ ವೇಳೆ, ನಿರಂತರ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಇದರಿಂದ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಮುಕ್ರಂಖಾನ್ ಬಂಧಿಸುವಂತೆ ಹಿಂದೂಪರ ಸಂಘಟನೆಗಳ ಒತ್ತಾಯಿಸಿದವು.
ನಂತರ ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಮಣಿಯದ ಸಂಘಟಕರು ಪ್ರಚೋದನಕಾರಿ ಹೇಳಿಕೆ ನೀಡಿದರೂ ಸಹ ಏಕೆ ಸ್ವಯಂ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಆಗ 24 ಗಂಟೆಯಲ್ಲಿ ಮುಕ್ರಂಖಾನ್ ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ ಮಾತನಾಡಿ, ಹಿಂದೂ ಮುಖಂಡರ ಬಗ್ಗೆ ಕೆಲ ದೇಶದ್ರೋಹಿಗಳು ಹೀಯಾಳುಸುವ ಮೂಲಕ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಅಂತರವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ವಿವಾದಾತ್ಮಕ ಹೇಳಿಕೆ ನೀಡಿದವರನ್ನು ಬಿಟ್ಟು ಹಿಂದೂಪರ ಹೋರಾಟಗಾರರನ್ನು ತಡೆಯುವ ಪೊಲೀಸರ ನಡೆಯನ್ನು ಅವರು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ಸೇಡಂ ಚಲೋ ಹೋರಾಟ ತಾತ್ಕಾಲಿಕ ಸ್ಥಗಿತ, 24 ಗಂಟೆಯಲ್ಲಿ ಬಂಧಿಸುವ ಭರವಸೆ
ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಎಸ್ಪಿ 24 ಗಂಟೆಗಳ ಒಳಗೆ ಮುಕ್ರಂಖಾನ್ ಬಂಧಿಸುವ ಆಶ್ವಾಸನೆ ನೀಡಿದ್ದಾರೆ. ಬಂಧಿಸದೇ ಹೋದರೆ ಭಾರತದ ಸಂವಿಧಾನಕ್ಕೆ ಚ್ಯುತಿ ತಂದಂತಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸದೇ ಹೋದರೆ ಶನಿವಾರ 3 ಗಂಟೆಗೆ ಮುಕ್ರಂಖಾನ್ ಮನೆಗೆ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.