ಕಲಬುರಗಿ : ರಾಜ್ಯದಲ್ಲಿ ಶೇ.25ರಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇದೆ. ಈ ವಾರದಲ್ಲಿ ಕೊರತೆ ನೀಗಿಸುವ ಅಗತ್ಯ ಕ್ರಮಕೈಗೊಳ್ಳುವುದಾಗಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ.
ಸೋಯಾಬೀನ್, ಡಿಎಪಿ, ಇತರೆ ಬಿಜಗಳ ಕೊರತೆ ಕಂಡು ಬಂದಿದೆ. ಈಗಾಗಲೇ ಕೇಂದ್ರ ರಸಗೊಬ್ಬರ ಸಚಿವ ಸದಾನಂದಗೌಡ ಹಾಗೂ ರಾಜ್ಯ ಕೃಷಿ ಸಚಿವ ಬಿ ಸಿ ಪಾಟೀಲ್ ಅವರ ಗಮನಕ್ಕೆ ಕೊರತೆಯ ಬಗ್ಗೆ ಗಮನಕ್ಕೆ ತರಲಾಗಿದೆ. ಕಲಬುರಗಿ ಭಾಗದಲ್ಲಿರುವ ಬೀಜ, ರಸಗೊಬ್ಬರ ಕೊರತೆ ಈ ವಾರ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಡಿಎಪಿ ಹೊರತು ಪಡೆಸಿ ಉಳಿದ ಗೊಬ್ಬರ ಸ್ಟಾಕ್ ಇದೆ. ಕಾಳಸಂತೆಯಲ್ಲಿ ರೈತರಿಗೆ ಹೊರೆ ಆಗದಂತೆ ಬೀಜ, ರಸಗೊಬ್ಬರವನ್ನ ಸರ್ಕಾರ ನಿಗದಿತ ಬೆಲೆಯಲ್ಲಿ ಮಾರಾಟ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ದುಬಾರಿ ಬೆಲೆಯಲ್ಲಿ ಮಾರಾಟ ಮಾಡಿ ರೈತರಿಗೆ ಹೊರೆ ಹಾಕಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದರು. ಇನ್ನು, ಎಲ್ಲೆಡೆ ಉತ್ತಮ ಮಳೆಯಾಗಿದೆ. ಡ್ಯಾಂಗಳು ತುಂಬುವ ಹಂತದಲ್ಲಿವೆ. ಪ್ರವಾಹ ಬಂದಾಗ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.
ಕೊರೊನಾ ಮೂರನೇ ಅಲೆ ಬಗ್ಗೆ ಎಚ್ಚರಿಕೆ
ಹಿರಿಯ ವೈದ್ಯರುಗಳ ಸಲಹೆ ಪ್ರಕಾರ ಕೊರೊನಾ 3ನೇ ಅಲೆ ಬರೋದು 50-50 ಚಾನ್ಸ್ ಇದೆ. 18 ವರ್ಷ ವಯಸ್ಸಿನೊಳಗಿರುವವರಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ, 18 ವರ್ಷ ಒಳಗಿನ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವದರಿಂದ ಮೂರನೇ ಅಲೆ ಬಂದರೂ ಹೆಚ್ಚಿನ ತೊಂದರೆ ಆಗಲಿಕ್ಕಿಲ್ಲ ಎಂದು ಅಂದಾಜಿಸಲಾಗಿದೆ. ಎರಡನೇ ಅಲೆಯಲ್ಲಿ ರಾಜ್ಯದಾದ್ಯಂತ 18 ವರ್ಷ ಒಳಗಿನ ಮಕ್ಕಳು ಕೊರೊನಾ ಸೋಂಕು ತಗುಲಿದರೂ ಮೃತಪಟ್ಟವರ ಸಂಖ್ಯೆ ಅತಿವಿರಳವಾಗಿದೆ. ಇದಕ್ಕೆ ಮಕ್ಕಳಲ್ಲಿರುವ ರೋಗ ನಿರೋಧಕ ಶಕ್ತಿ ಕಾರಣ. ಹೀಗಾಗಿ, 3ನೇ ಅಲೆಯಿಂದ ತೊಂದರೆ ಆಗಲಿಕಿಲ್ಲ. ಆದರೂ ಬೇಜವಾಬ್ದಾರಿ ತೋರದೆ ಮುನ್ನೆಚ್ಚರಿಕೆಯಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ವೈದ್ಯರ ನೇಮಕಾತಿ
ಮೂರನೇ ಅಲೆ ಮುನ್ನೆಚ್ಚರಿಕೆಯಾಗಿ ರಾಜ್ಯದಲ್ಲಿ 1700 ವೈದ್ಯರ ನೇಮಕಾತಿಗೆ ಸಂಪುಟ ಅನುಮತಿ ನೀಡಿದೆ. ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ 27 ಜನ ವೈದ್ಯರುಗಳ ನೇಮಕವಾಗಿದೆ. ಡಿ ದರ್ಜೆಯ ನರ್ಸಿಂಗ್ ಸಿಬ್ಬಂದಿ ನೇಮಕ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದು, ಅವರು ನೇಮಕಾತಿ ಪ್ರಕ್ರಿಯೆ ಮಾಡುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಹಾಳು ಬಿದ್ದ ಆಸ್ಪತ್ರೆ ಈಗ ಬ್ರಾಂಡ್ ನ್ಯೂ ಆಸ್ಪತ್ರೆ
ಶಹಾಬಾದ ಪಟ್ಟಣದ ಇಎಸ್‌ಐ ಆಸ್ಪತ್ರೆ ಸುಮಾರು ವರ್ಷಗಳ ಹಿಂದೆ ಸ್ಥಗಿತಗೊಂಡು ಪಾಳು ಬಿದ್ದಿತ್ತು. ಇದೀಗ ರಿನ್ಯೂವೇಶನ್ ಕಾರ್ಯ ಬರದಿಂದ ಸಾಗಿದೆ. ಮುಂದಿನ 15 ದಿನಗಳಲ್ಲಿ ಬ್ರಾಂಡ್ ನ್ಯೂ ಆಸ್ಪತ್ರೆಯಾಗಿ ಹೊರಹೊಮ್ಮಲಿದೆ. ಇದಕ್ಕೆ ಜಿಲ್ಲಾ ಮಿನರಲ್ ಫಂಡ್‌ದಿಂದ ಅಂದಾಜು 12 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕೇಂದ್ರ ಇಎಸ್‌ಐ ಸಂಸ್ಥೆ ಹಣ ಪಾವತಿಸುವ ಭರವಸೆ ನೀಡಿದೆ. ಇಎಸ್‌ಐನವರು ಆಸ್ಪತ್ರೆ ನಡೆಸುವುದಾದ್ರೆ ನಡೆಸಲಿ ಇಲ್ಲವಾದ್ರೆ ರಾಜ್ಯ ಸರ್ಕಾರದಿಂದ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ ಎಂದು ನಿರಾಣಿ ತಿಳಿಸಿದರು.