ಹುಬ್ಬಳ್ಳಿ: ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಸ್ನೇಹಿತನಿಗೆ ಚಾಕುವಿನಿಂದ ಇರಿದು ಇಬ್ಬರು ಯುವಕರು ಪರಾರಿಯಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಆನಂದನಗರ ರಸ್ತೆಯ ಅರ್ಜುನ ನಗರದಲ್ಲಿ ನಡೆದಿದೆ.
ಆನಂದ ನಗರದ ಇರ್ಫಾನ್ ಸೊಲ್ಲಾಪುರ ಚಾಕು ಇರಿತಕ್ಕೀಡಾದ ಯುವಕ. ಇಂದ್ರಪ್ರಸ್ಥ ನಗರದ ಜಮೀರ್ ಅಹ್ಮದ್ ಲಕ್ಕುಂಡಿ ಹಾಗೂ ಶಿವಪುತ್ರ ನಗರದ ಇಸ್ಮಾಯಿಲ್ ಧಾರವಾಡ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ರೈಲಿನಲ್ಲಿ ಪತ್ತೆಯಾದ ಬ್ಯಾಗ್ನಲ್ಲಿ ಲಕ್ಷ ಮೌಲ್ಯದ ಗಾಂಜಾ!
ಘಟನೆ ಏನು?
ಸೆ. 7 ರಂದು ದೀಪಕ್ ಜಮೀರ್ ಮತ್ತು ಇಸ್ಮಾಯಿಲ್ ನಡುವೆ ಗಲಾಟೆ ನಡೆದಿತ್ತು. ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋಣ ಬಾ ಎಂದು ದೀಪಕ್ನನ್ನು ಇಸ್ಮಾಯಿಲ್ ಮತ್ತು ಆತನ ಸ್ನೇಹಿತ ಜಮೀರ್ ಅರ್ಜುನ ನಗರದ ಖುಲ್ಲಾ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತ್ತೆ ಜಗಳ ತೆಗೆದಿದ್ದಾರೆ.
ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ದೀಪಕ್ನ ಗೆಳೆಯ ಇರ್ಫಾನ್ನ ಕೈ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಇಸ್ಮಾಯಿಲ್ ಮತ್ತು ಜಮೀರ್ ಪರಾರಿಯಾಗಿದ್ದಾರೆ. ಇನ್ನು ಘಟನೆ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.