ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದ ಸಿಬಿಐ ತನಿಖೆ ತಡೆಯಾಜ್ಞೆ ತೆರವು ಹಿನ್ನೆಲೆ ಧಾರವಾಡದಲ್ಲಿ ಮೃತ ಯೋಗೀಶಗೌಡ ಸಹೋದರ ಗುರುನಾಥಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶ ಮಾಡಿತ್ತು. ಆದೇಶದ ಹಿನ್ನೆಲೆ ಸಿಬಿಐ ತನಿಖೆ ನಡೆದಾಗಲೇ ಹೈಕೋರ್ಟ್ನಿಂದ ತಡೆಯಾಜ್ಞೆ ಬಂದಿತ್ತು. ಅದರ ವಿರುದ್ಧ ರಾಜ್ಯ ಸರ್ಕಾರ ಮತ್ತು ಸಿಬಿಐ, ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. ಸರಿಯಾದ ತನಿಖೆಗೆ ಅವಕಾಶ ಕೋರಿಕೆ ಸಲ್ಲಿಕೆ ಮಾಡಿತ್ತು ಎಂದರು.
ಸಿಬಿಐ ಕೊರಿಕೆ ಹಿನ್ನೆಲೆ ಹೈಕೋರ್ಟ್ ನೀಡಿದ ತಡೆಯನ್ನು ಸುಪ್ರೀಂ ತೆರವುಗೊಳಿಸಿದೆ. ಈಗ ತನಿಖೆ ಪುನರ್ ಆರಂಭ ಆಗಲಿದೆ. ತನಿಖೆ ಈಗಾಗಲೇ ಶೇ.75ರಷ್ಟು ಮುಗಿದಿತ್ತು. ತಡೆಯಾಜ್ಞೆ ಇಲ್ಲದೇ ಹೋಗಿದ್ದರೇ ತನಿಖೆಯೇ ಮುಗಿದು ಹೋಗುತ್ತಿತ್ತು. ನ್ಯಾಯಕ್ಕೆ ಜಯ ಸಿಗಬೇಕಾದರೆ ತಡೆಗಳು ಬಹಳ ಬರುತ್ತಲೇ ಇರುತ್ತವೆ. ಏನೇ ಆದರೂ ನಮಗೆ ಜಯ ಸಿಗುತ್ತೆ. ಅನ್ಯಾಯಕ್ಕೆ ದೇವರು ಶಿಕ್ಷೆ ಕೊಡುತ್ತಾನೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದ್ದಾರೆ.