ಹುಬ್ಬಳ್ಳಿ: ನಗರದಲ್ಲಿ ಗನ್ ಬಳಕೆ ಹೆಚ್ಚಾಗಿ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಅಂದ್ರೆ ಲೈಸನ್ಸ್ ರಿನಿವಲ್ ಸಮಯದಲ್ಲಿ ಅಕ್ರಮ ಪರವಾನಗಿ ಪಡೆದ ಗನ್ಗಳ ಲೈಸನ್ಸ್ನ್ನು ರದ್ದು ಮಾಡಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್ ಎಚ್ಚರಿಕೆ ರವಾನಿಸಿದ್ದಾರೆ.
ಲಾಕ್ಡೌನ್ ಗಿಂತ ಮೊದಲೂ ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಹಾಗೂ ವಿದ್ಯಾಗಿರಿ ಠಾಣೆಯ ಸರಹದ್ದಿನಲ್ಲಿ ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡುಹಾರಿಸಿ ಸಂಭ್ರಮಿಸಲಾಗಿತ್ತು. ಇವರೆಡೂ ಪ್ರಕರಣ ಮಾಸುವ ಮುನ್ನವೇ ವಾಣಿಜ್ಯ ನಗರಿಯಲ್ಲೂ ಅಂತಹುದೇ ಮತ್ತೊಂದು ಘಟನೆ ಮರುಕಳಿಸಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಆಯುಕ್ತರು ಗನ್ ಲೈಸನ್ಸ್ ಪರಿಶೀಲನೆಗೆ ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿದ ಆಯುಕ್ತರು, ಗನ್ ಲೈಸನ್ಸ್ ತೆಗೆದುಕೊಳ್ಳಬೇಕಾದರೇ ಇಲಾಖೆಯ ಟ್ರೈನಿಂಗ್ ಮುಗಿಸಬೇಕು. ಅಲ್ಲದೆ ಅದರ ಅವಶ್ಯಕತೆ ಬಗ್ಗೆ ಮನವರಿಕೆ ಮಾಡೋದು ಸೇರಿದಂತೆ ಅನೇಕ ರೂಲ್ಸ್ ಗಳಿವೆ. ಸದ್ಯ ಗನ್ ಲೈಸನ್ಸ್ ರಿನಿವಲ್ ಟೈಂನಲ್ಲಿ ಅಕ್ರಮಗಳು ಸಾಬೀತಾದರೆ ಅವೆಲ್ಲವಕ್ಕೂ ಕಡಿವಾಣ ಹಾಕುತ್ತೇವೆ ಎಂದು ಹೇಳಿದ್ರು.
ಆದರೆ ಕಳೆದ 2018-19 ರಲ್ಲಿ ಮಧ್ಯವರ್ತಿಗಳ ಮೂಲಕ ಗನ್ ಲೈಸನ್ಸ್ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಅಕ್ರಮ ಗನ್ ಲೈಸನ್ಸ್ ಗಳನ್ನ ಕ್ಯಾನ್ಸಲ್ ಮಾಡೋದಾಗಿ ಕಡ್ಡಿ ತುಂಡಾದಂತೆ ಹೇಳುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಕಾರ್ಯಕ್ಕೆ ಬರುತ್ತದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.