ಹುಬ್ಬಳ್ಳಿ: ನೆರೆ ಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವ ಅಗತ್ಯ ಇಲ್ಲ. ಈಗಾಗಲೇ ಕೇಂದ್ರ ಅಧ್ಯಯನ ತಂಡ, ಅಮಿತ್ ಶಾ ಸಮೀಕ್ಷೆ ನಡೆಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರದ ಅಧ್ಯಯನ ತಂಡ ಹಾಗೂ ರಾಜ್ಯ ಸರ್ಕಾರ ಈಗಾಗಲೇ ಸಮಗ್ರ ಸಮೀಕ್ಷೆ ನಡೆಸಿವೆ. ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ವೈಮಾನಿಕ ಸಮೀಕ್ಷೆ ನಡೆಸಿ ಇಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದ್ದಾರೆ. ಇದರಿಂದಾಗಿ ಸಂತ್ರಸ್ತರಿಗೆ ಕೇಂದ್ರದಿಂದ ಅಗತ್ಯ ಪರಿಹಾರ ದೊರೆಯುವ ಭರವಸೆ ಇದೆ. ಮತ್ತೆ ಮೋದಿ ಭೇಟಿ ಮಾಡುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಸಂತ್ರಸ್ತರಿಗೆ ₹ 10 ಸಾವಿರ ನೀಡಿರುವುದೇ ದೊಡ್ಡದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಈ ಬಗ್ಗೆ ಮಾಹಿತಿ ಪಡೆದೇ ಪ್ರತಿಕ್ರಿಯೆ ನೀಡುವೆ ಎಂದರು.