ಹುಬ್ಬಳ್ಳಿ: ಕಳೆದ ಕೆಲ ದಿನಗಳಿಂದ ಫೋನ್ ಕದ್ದಾಲಿಕೆ ಪ್ರಕರಣ ತನಿಖೆ ಮಾಡಬೇಕೆಂದು ಎಲ್ಲಾ ಪಕ್ಷಗಳು ಒತ್ತಾಯ ಮಾಡುತ್ತಿದ್ದವು. ಆದರೆ, ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದೆ. ಇದರಿಂದ ಬಿಜೆಪಿಯವರಿಗೆ ಸದುಪಯೋಗ ಆಗುತ್ತದೆ ಎಂದು ಸಿಬಿಐಗೆ ವಹಿಸಲಾಗಿದೆ. ಆದರೆ, ಸಿಬಿಐ, ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡುತ್ತದೆ. ಹಾಗಾಗಿ ನಿಷ್ಪಕ್ಷಪಾತ ತನಿಖೆ ನಡೆಯುವುದಿಲ್ಲ. ನಮ್ಮ ರಾಜ್ಯದಲ್ಲಿ ಅನೇಕ ಇಲಾಖೆಗಳಿವೆ ಅವುಗಳಿಂದ ತನಿಖೆ ಮಾಡಿಸಬೇಕಿತ್ತು ಎಂದರು.
ಫೋನ್ ಕದ್ದಾಲಿಕೆ ಫಲಿತಾಂಶ ಬಂದ ನಂತರ ನೋಡೋಣ ಏನು ಆಗುತ್ತದೆ ಎಂದು. ಈ ಹಿಂದೆ ನಡೆದ ಘಟನೆಗಳನ್ನ ಸಹ ಸಿಬಿಐಗೆ ಒಪ್ಪಿಸಬೇಕು. ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಈ ರೀತಿ ಫೋನ್ ಕದ್ದಾಲಿಕೆ ನಡೆದಿದೆ. ಅಂದು ಅಶೋಕ್ ಮತ್ತು ಜಗದೀಶ್ ಶೆಟ್ಟರ್ ಸುಮ್ಮನೆ ಕುಳಿತಿದ್ರು. ಆದರೆ, ಈಗ ತನಿಖೆ ಆಗಲಿ ಎಂದು ಓಡಾಡುತ್ತಿದ್ದಾರೆ ಎಂದರು.
ಇನ್ನು ಮಾಧ್ಯಮದವರು ನಿಮ್ಮ ಫೋನ್ ಕದ್ದಾಲಿಕೆ ಆಗಿದೆಯಾ? ಎಂದು ಕೇಳಿದ ಪ್ರಶ್ನೆಗೆ ನನ್ನ ಫೋನ್ ಕದ್ದಾಲಿಕೆ ಆಗಿಲ್ಲ, ನಾ ಮಾತನಾಡಿದ್ದು ತೆಗೆದುಕೊಂಡು ಅವರು ಏನು ಮಾಡುತ್ತಾರೆ. ಈ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಸರಿಯಾಗಿ ತನಿಖೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರ ಬೀಳುತ್ತದೆ. ಒಮ್ಮೆ ಸತ್ಯ ಹೊರ ಬರಬೇಕಿದೆ. ಫೋನ್ ಟ್ಯಾಪ್ ಮಾಡಲು ಮುಖ್ಯಮಂತ್ರಿಗೆ ಅಧಿಕಾರವಿದೆ. ಅದು ದೇಶಕ್ಕೆ ಮತ್ತು ರಾಜ್ಯಕ್ಕೆ ಗಂಡಾಂತರ ಬಂದಾಗ, ಇಂತಹ ವಿಚಾರದಲ್ಲಿ ಅಲ್ಲಾ ಎಂದರು.