ಧಾರವಾಡ: ಲಿಂಗಾಯತ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ವಿನಯ್ ಕುಲಕರ್ಣಿ, ಪ್ರಹ್ಲಾದ್ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಹ್ಲಾದ್ ಜೋಶಿ ಲಿಂಗಾಯತ ಸಮಾಜಕ್ಕೆ ಒಂದು ರೀತಿ ಕೊಂಡಿ ಮಂಚಣ್ಣ ಇದ್ದಂತೆ. ಬಸವಣ್ಣನವರ ಕಾಲದಲ್ಲಿ ಕೊಂಡಿ ಮಂಚಣ್ಣ ಬಸವಣ್ಣನವರನ್ನು ಕಾಡಿದ್ದ. ಈಗ ಲಿಂಗಾಯತ ಸಮಾಜಕ್ಕೆ ಜೋಶಿ ಕೊಂಡಿ ಮಂಚಣ್ಣ ಆಗಿದ್ದಾರೆ. ನಮ್ಮ ಸಮಾಜದ ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದು ಇದೇ ಜೋಶಿ. ಮುರುಘಾ ಮಠದ ಹಿಂದಿನ ಸ್ವಾಮೀಜಿ ನನ್ನ ವಿರುದ್ಧ ಕರಪತ್ರ ಹಂಚುವ ಹಿಂದೆಯೂ ಜೋಶಿ ಇದ್ದಾರೆ ಎಂದು ಆರೋಪಿಸಿದ ಅವರು, ನಮ್ಮ ಸಮಾಜ ಇನ್ನಾದರೂ ಜೋಶಿ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದರು.
ಕುಮಾರೇಶ್ವರ ನಗರ ಕಟ್ಟಡ ದುರಂತ ವಿಚಾರದಲ್ಲಿ ನಾಲ್ವರು ಮಾಲೀಕರ ಪೈಕಿ ನಮ್ಮ ಮಾವನವರೂ ಒಬ್ಬರು. ಆದರೆ ನಾಲ್ವರೂ ಕೂಡ ಬಿಜೆಪಿಯವರೇ. ದುರಂತದಲ್ಲಿ ಸತ್ತವರ ಬಗ್ಗೆ ನನಗೂ ದುಃಖವಿದೆ. ನಾನೂ ಕೂಡ ಮೂರುನಾಲ್ಕು ದಿನ ಅಲ್ಲಿ ನಿಂತಿದ್ದೆ. ಆದರೆ ಬಿಜೆಪಿಯವರೆಲ್ಲ ಬಂದು ಫೋಟೋಗೆ ಪೋಸ್ ನೀಡಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವಿನಯ್ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.