ಧಾರವಾಡ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯದು ಮಾಡಲಿ, ಕೆಟ್ಟದು ಮಾಡಲಿ. ಒಬ್ಬ ವ್ಯಕ್ತಿ ಪಕ್ಷದ ಸಿದ್ಧಾಂತಗಳನ್ನು ಟೀಕೆ ಮಾಡಿದಾಗ ಅವರೂ ಕೂಡ ಟೀಕೆಗಳನ್ನು ಎದುರಿಸಲು ರೆಡಿ ಇರಬೇಕು. ವಿರೋಧ ಪಕ್ಷಗಳು ಸದನಕ್ಕೆ ಹೋದರೆ ಹೋಗಲಿ. ಅವರು ಅವರ ವಿಚಾರ ಮಂಡಿಸಲಿ. ನಮ್ಮ ವಿಚಾರ ನಾವು ಮಂಡಿಸುತ್ತೇವೆ. ಸ್ವಾತಂತ್ರ್ಯ ಹೋರಾಟಗಾರರಾಗಿ ಒನ್ ಸೈಡೆಡ್ ಟೀಕೆ ಮಾಡೋದು ಸರಿಯಲ್ಲ. ಯತ್ನಾಳ್ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಾದರೆ, ದೊರೆಸ್ವಾಮಿ ಒನ್ ಸೈಡೆಡ್ ಟೀಕೆ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಹದಾಯಿ ಅಧಿಸೂಚನೆ ವಿಚಾರಕ್ಕೆ ಮಾತನಾಡಿದ ಅವರು, ಮಹದಾಯಿಗಾಗಿ ತೆರೆಮರೆಯಲ್ಲಿ ಏನು ಪ್ರಯತ್ನ ಮಾಡಬೇಕೋ ಮಾಡಿದ್ದೇವೆ. ಪ್ರಯತ್ನ ಮಾಡಿ ಅಧಿಸೂಚನೆ ಹೊರಡಿಸಲು ಯಶಸ್ವಿಯಾಗಿದ್ದೇವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಅಧಿಸೂಚನೆ ಹೊರಡಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ದೆಹಲಿ ಹಿಂಸಾಚಾರ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಆಪ್ ಪಕ್ಷದ ಕೆಲವರ ಕೈವಾಡ ಇದೆ. ಟ್ರಂಪ್ ಬಂದಾಗಲೇ ಇವರು ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಅಮಿತ್ ಶಾ ದೇಶದ ಯಶಸ್ವಿ ಗೃಹ ಮಂತ್ರಿ. ದೇಶದಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸರ್ಕಾರದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿಗೆ ಬೇರೆ ಕೆಲಸ ಇಲ್ಲ. ಹೀಗಾಗಿ ಶಾ ರಾಜೀನಾಮೆ ಕೇಳುತ್ತಿದ್ದಾರೆ ಎಂದರು.