ಧಾರವಾಡ: ಕೇಂದ್ರ ಪ್ರವಾಹ ಅಧ್ಯಯನ ತಂಡವು ನಾಳೆ ಮಧ್ಯಾಹ್ನ ಧಾರವಾಡ ಜಿಲ್ಲೆಯಲ್ಲಿ ಪ್ರವಾಹಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.
ಕೇಂದ್ರ ಪ್ರವಾಹ ಅಧ್ಯಯನ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಕಾಶ್, ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆಯ ನಿರ್ದೇಶಕ ಎಸ್ ಸಿ ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪುನ್ನುಸ್ವಾಮಿ, ಕೇಂದ್ರ ಜಲ ಸಂಪನ್ಮೂಲದ ಪ್ರಾದೇಶಿಕ ಕಚೇರಿಯ ಅಧೀಕ್ಷಕ ಅಭಿಯಂತರ ಎಸ್.ಇ ಜಿತೇಂದ್ರ ಪನ್ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ದಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ ಪಿ ಸುಮನ್ ಭೇಟಿ ನೀಡಲಿದ್ದಾರೆ.
ಭೇಟಿ ನೀಡಲಿರುವ ಸ್ಥಳಗಳು:
ನಾಳೆ ಮಧ್ಯಾಹ್ನ 3 ಗಂಟೆಗೆ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸುವರು. ಮಧ್ಯಾಹ್ನ 3:30ಕ್ಕೆ ಅಳಗವಾಡಿ ಗ್ರಾಮದಲ್ಲಿ ರಸ್ತೆ, ಸೇತುವೆ ಹಾಗೂ ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ ಬೆಳೆಗಳ ಹಾನಿ ವೀಕ್ಷಿಸುವರು. ಸಂಜೆ 4:15ಕ್ಕೆ ಯಮನೂರು ಸೇತುವೆ ಹಾಗೂ ಬೆಳೆ ಹಾನಿ, ಸಂಜೆ 4:30ಕ್ಕೆ ಹೆಬಸೂರ ಗ್ರಾಮದಲ್ಲಿ ಸೇತುವೆ ಮತ್ತು ಜಲಾವೃತಗೊಂಡ ಕೃಷಿ ಭೂಮಿಯನ್ನು ವೀಕ್ಷಿಸುವರು.
ಸಂಜೆ 4:40ಕ್ಕೆ ಕಿರೇಸೂರ ಗ್ರಾಮದಲ್ಲಿ ಮೆಣಸಿನಕಾಯಿ ಮತ್ತು ಉಳ್ಳಾಗಡ್ಡಿ ಬೆಳೆಹಾನಿ ಪರಿಶೀಲಿಸುವರು. ಸಂಜೆ 5:10ಕ್ಕೆ ಹುಬ್ಬಳ್ಳಿ ನಗರದ ಉಣಕಲ್-ಹುಲಕೊಪ್ಪ ಸೇತುವೆ, ಹನುಮಂತನಗರ ಹಾಗೂ ದೇವಿನಗರಗಳಲ್ಲಿ ಹಾನಿಯಾಗಿರುವ ಸೇತುವೆಗಳು, ಗೋಕುಲದಲ್ಲಿ ಮನೆಗಳ ಹಾನಿ ವೀಕ್ಷಿಸುವರು. ಸಂಜೆ 6:10ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅತಿವೃಷ್ಟಿ ಚಿತ್ರಗಳನ್ನು ವೀಕ್ಷಿಸುವರು. ನಂತರ ಜಿಲ್ಲಾಧಿಕಾರಿಗಳಿಂದ ವಿವರಗಳನ್ನು ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.