ಹುಬ್ಬಳ್ಳಿ(ಧಾರವಾಡ): ಗುದನಾಳದಲ್ಲಿ ಟಾಯ್ಲೆಟ್ ಜೆಟ್ ಸ್ಪ್ರೇ (toilet jet spray) ಸಿಕ್ಕಿಹಾಕಿಕೊಂಡಿದ್ದ 32 ವರ್ಷದ ಯುವಕನೊಬ್ಬನಿಗೆ ಕಿಮ್ಸ್ ಆಸ್ಪತ್ರೆ ವೈದ್ಯರು ಸುಮಾರು 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಟಾಯ್ಲೆಟ್ ಜೆಟ್ ಸ್ಪ್ರೇಯನ್ನು ಹೊರ ತೆಗೆದಿರುವ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಯುವಕ ಬೈರಿದೇವರಕೊಪ್ಪ ಪ್ರದೇಶದ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ. ನವೆಂಬರ್ 20ರ ಶನಿವಾರ ಬೆಳಗ್ಗೆ ತೀವ್ರ ಅಸ್ವಸ್ಥಗೊಂಡಿದ್ದ ಸ್ಥಿತಿಯಲ್ಲಿದ್ದ ಈತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಮಲೇರಿದ ಸ್ಥಿತಿಯಲ್ಲಿದ್ದ ಎಂದು ಕಿಮ್ಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಇದೊಂದು ಅಪರೂಪದ ಪ್ರಕರಣವಾಗಿದ್ದು, ಟಾಯ್ಲೆಟ್ ಜೆಟ್ ಸ್ಪ್ರೇ ಹೇಗೆ ಗುದನಾಳದಲ್ಲಿ ಸಿಕ್ಕಿಹಾಕಿಕೊಂಡಿತ್ತು ಎಂಬುದರ ಬಗ್ಗೆ ಖಚಿತತೆ ಇಲ್ಲವೆಂದು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ. ಗುದನಾಳದಲ್ಲಿ ಜೆಟ್ ಸ್ಪ್ರೇ ಸಿಕ್ಕಿಹಾಕಿಕೊಂಡಿದ್ದರಿಂದ ರೋಗಿ ಜೋರಾಗಿ ಅಳುತ್ತಿದ್ದ, ಸುಮಾರು ತಾಸುಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆಯಲಾಗಿದೆ. ಸದ್ಯ ಆತ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೂರು ದಿನಗಳಲ್ಲಿ ಐಸಿಯುನಿಂದ ಹೊರಗೆ ಬರಲಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅತಿಯಾಗಿ ಮದ್ಯ ಸೇವಿಸಿ ಟಾಯ್ಲೆಟ್ ಜೆಟ್ ಸ್ಪ್ರೇ ಮೇಲೆ ಮಲಗಿದಾಗ ಈ ಘಟನೆ ನಡೆದಿರುವುದಾಗಿ ರೋಗಿ ಹೇಳಿಕೆ ನೀಡಿದ್ದಾನೆ. ಕಿಮ್ಸ್ ಆಸ್ಪತ್ರೆ ವೈದ್ಯರು ನೀಡಿದ ಹೇಳಿಕೆ ಆಧಾರದ ಮೇಲೆ ಭಾನುವಾರ ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.