ಹುಬ್ಬಳ್ಳಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡುತ್ತಿರುವ ಟಿಪ್ಪರ್ ಚಾಲಕರಿಗೆ ಎರಡು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಟಿಪ್ಪರ್ ಚಾಲಕರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಾಲಿಕೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಅನೇಕರು ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪಾಲಿಕೆ, ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೆ ಸತಾಯಿಸುತ್ತಿದೆ. ಅತೀ ಕಡಿಮೆ ವೇತನದಲ್ಲಿ ಚಾಲಕರು ಸೇವೆ ಸಲ್ಲಿಸುತ್ತಿದ್ದು, ಇಎಸ್‌ಐ, ಪಿಎಫ್ ಮರೀಚಿಕೆಯಾಗಿದೆ. ಇನ್ನು ಪಾಲಿಕೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಾಲಕರು ಆರೋಪಿಸಿದ್ದಾರೆ.
ಎರಡು ತಿಂಗಳಿಂದ ವೇತನವಿಲ್ಲದೆ ಟಿಪ್ಪರ್ ಚಾಲಕರು ಕುಟುಂಬ ನಿರ್ವಹಣೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಿ ವೇತನ ಸಂದಾಯ ಮಾಡಬೇಕು, ಒಂದು ವೇಳೆ ವೇತನ ಪಾವತಿಸದಿದ್ದರೆ ಪಾಲಿಕೆ ಮತ್ತು ಗುತ್ತಿಗೆದಾರರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಪಾಲಿಕೆ ಅಪರ ಆಯುಕ್ತ ಅಜೀಜ್ ದೇಸಾಯಿ ಮೂಲಕ ಮನವಿ ಸಲ್ಲಿಸಿದರು. ವಿಶೇಷ ಅಂದ್ರೆ ಟಿಪ್ಪರ್ ಚಾಲಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು.