ಹುಬ್ಬಳ್ಳಿ: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೆಡೆ ಬಾರ್ಗಳು ಬಂದ್ ಆಗಿವೆ. ಹೀಗಾಗಿ ಕಳ್ಳರ ಗ್ಯಾಂಗ್ ಒಂದು ಎಣ್ಣೆ ಅಂಗಡಿಗೆ ಕನ್ನ ಹಾಕಿದ ಘಟನೆ ಹುಬ್ಬಳ್ಳಿಯ ಗಬ್ಬೂರಿನ ಎಂಎಂಐಎಲ್ನಲ್ಲಿ ನಡೆದಿದೆ.
ರಾತ್ರಿ ವೇಳೆ ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್ಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಕುಡುಕರಿಗೆ ಮದ್ಯ ಸಿಗದ ಹಿನ್ನೆಲೆಯಲ್ಲಿ ಎಣ್ಣೆ ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಎಂಎಸ್ಐಎಲ್ನಲ್ಲಿ ಬೆಲೆಬಾಳುವ ಮದ್ಯದ ಬಾಟಲಿಗಳನ್ನು ಬಿಟ್ಟು ಕಡಿಮೆ ದರ ಮದ್ಯದ ಬಾಕ್ಸ್ ಗಳನ್ನು ಕಳ್ಳತನ ಮಾಡಿದ್ದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.