ಹುಬ್ಬಳ್ಳಿ : ಬಣ್ಣದ ಬದುಕಿನಲ್ಲಿ ಅದೆಷ್ಟೋ ಮರೆಯಲಾಗದ ನೋವುಗಳಿರುತ್ತವೆ. ಆ ನೋವು ಮನದಾಳದಲ್ಲಿ ಹುದುಗಿಟ್ಟು ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗಭೂಮಿಯಲ್ಲಿ ನಟಿಸಿ ಸಾಧನೆ ಮಾಡುವುದು ಅಸಾಧ್ಯದ ಮಾತು. ಎಂತದೇ ಕಷ್ಟಗಳು ಬಂದರೂ ಹಿಂದೇಟು ಹಾಕದೇ ರಂಗಭೂಮಿಯಲ್ಲಿ ಸಾಧನೆ ಮಾಡಿದ ಸಾಧಕನ ಕಣ್ಣೀರಿನ ಕಥೆ ಇಲ್ಲಿದೆ.
ಸಾಕಷ್ಟು ಪುರಸ್ಕಾರಗಳ ಪ್ರಮಾಣ ಪತ್ರವನ್ನು ಮುಂದಿಟ್ಟು ಕೊಂಡಿರುವ ವ್ಯಕ್ತಿ ಹೆಸರು ಪ್ರಕಾಶ ಕಡಪಟ್ಟಿ. ಮೂಲತಃ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಪಟ್ಟಿಯ ಗ್ರಾಮದವರು. ಪ್ರಸ್ತುತ ಕುಂದಗೋಳ ತಾಲೂಕಿನ ಬೆಟದೂರ ಇನಾಂಕೊಪ್ಪದ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಕನ್ನಡ ರಂಗಭೂಮಿ ಸಾಧಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಅಚ್ಚಳಿಯದ ರೀತಿ ಅಚ್ಚೊತ್ತಿದ ಸಾಧಕ.
ಪಿಯುಸಿ ವಿದ್ಯಾರ್ಹತೆ ಹೊಂದಿರುವ ಇವರು ಬಾಲ್ಯದಿಂದಲೂ ನಾಟಕ ಪ್ರೀತಿ, ಅಭಿಮಾನ ರಂಗಭೂಮಿಗೆ ಕರೆದುಕೊಂಡು ಹೋಗಿದೆ. 73 ವಯಸ್ಸಿನಲ್ಲಿಯೂ ಕೂಡ ರಂಗಭೂಮಿಯ ಮೇಲಿನ ಪ್ರೀತಿ ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ನಾಟಕ ರಚನೆ, ಸಂಗೀತ ಸಂಯೋಜನೆ, ಗೀತ ರಚನೆ, ಹಾಡಿನ ಮೂಲಕ ಹೆಸರು ವಾಸಿಯಾಗಿರುವ ಕಲಾವಿದನ ಬದುಕು ನಿಜಕ್ಕೂ ಕಷ್ಟದಲ್ಲಿಯೇ ಕಣ್ಣೀರು ಇಡುವಂತಾಗಿದೆ.
ಭಲೇ ಮಗಳೆ, ಅನಂತರ ಚಿನ್ನದ ಗೊಂಬೆ, ಸತಿ ಸಂಸಾರದ ಜ್ಯೋತಿ, ಭೂಮಿ ತೂಕದ ಹೆಣ್ಣು, ತವರು ಬಿಟ್ಟು ತಂಗಿ, ಮುತ್ತೈದೆಗೆ ಕುತ್ತು ಐದು, ಬಂಗಾರದ ಮನುಷ್ಯ ಹೀಗೆ ಹಲವಾರು ನಾಟಕ ರಚನೆ ಮತ್ತು ಅಭಿನಯದ ಮೂಲಕ ಜೀವನವನ್ನೆ ರಂಗಭೂಮಿಗೆ ಮೀಸಲಿಟ್ಟ ಕಲಾವಿದನ ಬದುಕು ಕಣ್ಣೀರಿನ ಕವಲುದಾರಿಯಾಗಿದೆ.
ಡಾ. ಗುಬ್ಬಿ ವೀರಣ್ಣ, ಕಲಾಕೌಸ್ತುಭ, ರಂಗಶ್ರೀ ಪ್ರಶಸ್ತಿ ಸೇರಿ ಹತ್ತು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಸುಮಾರು 55ಕ್ಕೂ ಹೆಚ್ಚು ವರ್ಷಗಳ ಅವಿಸ್ಮರಣೀಯ ಸೇವೆಯನ್ನು ರಂಗಭೂಮಿಗೆ ನೀಡಿದ್ದಾರೆ. ಜೀವಿಸಲು ಒಂದು ಸೂರು ಇಲ್ಲದ ಸ್ಥಿತಿಯಲ್ಲಿಯೇ ಬದುಕಿನ ಬಂಡಿ ಮುನ್ನಡೆಸುತ್ತಿದ್ದಾರೆ. ಇಂತವರ ಕಷ್ಟಕ್ಕೆ ಸಹೃದಯದವರು ಸ್ಪಂದಿಸಬೇಕಿದೆ.
ಸರ್ಕಾರ ನೀಡುವ ಮಾಶಾಸನದಲ್ಲಿಯೇ ಜೀವನ ನಡೆಸುತ್ತಿದ್ದು, ಸರ್ಕಾರ ಇನ್ನೂ ಹೆಚ್ಚಿನ ಪರಿಹಾರವನ್ನ ಕಲಾವಿದರಿಗೆ ನೀಡಬೇಕಿದೆ. ಅಲ್ಲದೇ ಯಾರಾದ್ರೂ ಸಹಾಯ ಮಾಡಲು ಆಸಕ್ತಿಯಿರುವವರು sbi A/c 34416445674 ifsc code-SBIN0020824ಗೆ ಧನ ಸಹಾಯ ಮಾಡಲು ಕಲಾವಿದ ಪ್ರಕಾಶ ಕಡಪಟ್ಟಿ ಮನವಿ ಮಾಡಿದ್ದಾರೆ.