ಧಾರವಾಡ: ಜನರ ನೆರವಿಗಾಗಿ ಸರ್ಕಾರ 1,250 ಕೋಟಿ ರೂಪಾಯಿಗಳ ಪ್ಯಾಕೇಜ್ ನೀಡಿದೆ. ದುಡಿಯುವ ವರ್ಗಕ್ಕೆ ಇದು ವಿಶೇಷವಾದ ಪ್ಯಾಕೇಜ್ ಎಂದು ಡಿಸಿಎಂ ಗೋವಿಂದ ಕಾರಜೋಳ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 2,200 ಕೋಟಿ ಕೊಡಲಾಗಿತ್ತು. ಈ ಬಾರಿ ಅರ್ಥಿಕ ಸಂಕಷ್ಟದ ನಡುವೆಯೂ ಕೊಟ್ಟಿದ್ದೇವೆ, ನಾವು ಹೆಚ್ಚು ಕೊಟ್ಟಿದ್ದೇವೆ ಅಂತಾ ಈಗ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೆ ಈ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಬಹಳ ವಿಶೇಷ ಎಂದರು.
ಲಾಕ್‌ಡೌನ್ ಮುಂದುವರಿಕೆ ವಿಚಾರಕ್ಕೆ ಮಾತನಾಡಿದ ಅವರು, ನಿತ್ಯದ ಸಾವು ನೋವಿನ ಸಂಖ್ಯೆ ನೋಡಿದಾಗ ಹಳ್ಳಿಗಳಿಗೆ ಕೊರೊನಾ ಹಬ್ಬಿದೆ. ಬಿಗಿಯಾದ ಲಾಕ್‌ಡೌನ್ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ಕಿಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯದು ಯಾರೇ ಮಾಡಿದರೂ ನಾವು ಸ್ವಾಗತಿಸುತ್ತೇವೆ. ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದಲೇ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರವಾಹ ಬಂತು, ಕೊರೊನಾ ಬಂತು, ಮತ್ತೇ ಪ್ರವಾಹ ಬಂತು, ಕೊರೊನಾ ಮತ್ತೇ ಬಂತು. ಎರಡು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ 60 ಸಾವಿರ ಕೋಟಿಯಷ್ಟು ಹಾನಿಯಾಗಿದೆ. ನಿಗದಿತ ಆದಾಯವೂ ಬರುತ್ತಿಲ್ಲ ಹೀಗಾಗಿ ನಾವು ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ನಿಭಾಯಿಸಿಕೊಂಡು ಹೊರಟಿದ್ದೇವೆ ಎಂದರು.