ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ಉತ್ತರ ಕರ್ನಾಟಕ ಭಾಗದ ಅತೀ ಹೆಚ್ಚು ಜವಳಿ ಹಾಗೂ ಬಟ್ಟೆ ಅಂಗಡಿಗಳನ್ನು ಹೊಂದಿರುವ ನಗರ. ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ಇಲ್ಲಿ ಸಾವಿರಾರು ಕೋಟಿ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಕಾರಣ ವ್ಯಾಪಾರಸ್ಥರು ಕಂಗಾಲಾಗಿದ್ದು, ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ.
ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಜನಜೀವನ ಅಲ್ಪಮಟ್ಟಿಗೆ ಯಥಾಸ್ಥಿತಿಗೆ ಮರಳಿದೆ. ಆದರೆ, ಗ್ರಾಹಕರನ್ನು ಅಂಗಡಿಳತ್ತ ಸೆಳೆಯಲು ಹರಸಾಹಸ ಪಡುವ ಸ್ಥಿತಿ ಎದುರಾಗಿದೆ. ಅಂಗಡಿಕಾರರು ಹೊಸ ಹೊಸ ತಂತ್ರಜ್ಞಾನ ಬಳಸಿ ಹಾಗೂ ಆನ್ಲೈನ್ ಜಾಹೀರಾತುಗಳ ಮೂಲಕ ರಿಯಾಯಿತಿ ಆಫರ್ ಕೊಡುವ ಕೆಲಸದಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಜಾಲತಾಣಗಳ ಮೂಲಕ ಅಂಗಡಿಗಳ ವಿಳಾಸ ಹಾಗೂ ಆಫರ್ಗಳನ್ನು ಘೋಷಿಸಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಜವಳಿ ಉದ್ಯಮವನ್ನೇ ಅವಲಂಬಿಸಿರುವ ಉಪ ಕಸುಬುದಾರರು ಬಾಗಿಲು ಮುಚ್ಚಿ ಬೀದಿಗೆ ಬರುವ ಸ್ಥಿತಿ ಉದ್ಭವಿಸಿದೆ. ಮಗ್ಗಗಳ ಮಾಲೀಕರು ಮಾರುಕಟ್ಟೆ ಇಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ. ಜವಳಿ ಉದ್ದಿಮೆದಾರರೂ ತಮ್ಮ ನೇಕಾರ ಕಾರ್ಮಿಕರ ಜೀವನಾಂಶವನ್ನೂ ನೀಡದ ಸ್ಥಿತಿಯಲ್ಲಿದ್ದಾರೆ.
ಸ್ವತಃ ತಾವೇ ಲಕ್ಷಾಂತರ ಸೀರೆಗಳನ್ನು ಸಂಗ್ರಹಿಸಿರುವ ಅವರು ತಮ್ಮ ಉದ್ಯಮವನ್ನು ಮುಂದುವರೆಸುವ ಸ್ಥಿತಿಯಲ್ಲಿ ಇಲ್ಲ. ಲಾಕ್ಡೌನ್ ಪೂರ್ವ ನಿಗದಿಯಾಗಿದ್ದ ನೂರಾರು ಮದುವೆಗಳು, ಶುಭ-ಸಮಾರಂಭಗಳಿಗೆ ಬ್ರೇಕ್ ಬಿದ್ದ ಕಾರಣ, ಅವುಗಳನ್ನೇ ನಂಬಿ ಬದುಕುತ್ತಿದ್ದವರಿಗೆ ಸಾಕಷ್ಟು ನಷ್ಟ ಉಂಟಾಯಿತು. ಇನ್ನು ಬಟ್ಟೆಗಳನ್ನು ಹೊಲಿದು ಜೀವನ ನಡೆಸುವ ಟೈಲರ್ಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.