ಧಾರವಾಡ: ಜಾನಪದ ವಸ್ತ್ರಗಳ ರಂಗು.. ಹಾಡು-ನೃತ್ಯಗಳ ವೈಭವ.. ಮನಸೂರೆಗೊಳ್ಳುವ ಕಲಾವಿದರ ಪ್ರತಿಭೆ... ಇದು ಯಾವುದೋ ಸಾಂಸ್ಕೃತಿಕ ಉತ್ಸವದಲ್ಲಿ ಕಂಡುಬಂದ ದೃಶ್ಯವಲ್ಲ. ಬದಲಾಗಿ ಜನರು ತಪ್ಪದೇ ಮತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿರುವ ಯುವಕರ ಕಾರ್ಯಕ್ರಮ.
ಹೌದು, ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ( ಸ್ವೀಪ್) ಸಮಿತಿಯ ಆಶ್ರಯದಲ್ಲಿ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ, ಚುನಾವಣಾ ಜಾಗೃತಿ ಗೀತೆ, ಜಾನಪದ ನೃತ್ಯ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವ ಸಾರಿದರು. ಸುಮಾರು ಒಂದೂವರೆ ತಿಂಗಳಿನಿಂದ ನಿರಂತರವಾಗಿ ವೈವಿಧ್ಯಮಯವಾಗಿ ಮತದಾರರಿಗೆ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿಗಳು, ಮತದಾನ ಮಾಡಿ ಎಂದು ಕೂಗಿ ಹೇಳಿದರು.
ಆಂಗ್ಲ ವರ್ಣಮಾಲೆಯ DWD SVEEP ಹಾಗೂ ಕರ್ನಾಟಕ ನಕಾಶೆಯ ಮಾದರಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ನಿಂತು, ಚುನಾವಣಾ ಜಾಗೃತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಗ್ರಾಮೀಣ ಶಾಲಾ ಶಿಕ್ಷಕಿಯರು ಲೋಕಸಭಾ ಚುನಾವಣೆ 2019 ಎಂದು ಬರೆದ ಬಿಂದಿಗೆಗಳೊಂದಿಗೆ ಹ್ಯಾಪಿ ವೋಟರ್ಸ್ ಡೇ ಎಂಬ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು.
ಅಲ್ಲದೆ, ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಆ ಬಳಿಕ ಜಿಲ್ಲಾಧಿಕಾರಿ ದೀಪಾ ಚೋಳನ ಮಾತನಾಡಿ, ಯುವಜನರು, ಮತಚಲಾಯಿಸಿ ಬೆರಳಿಗೆ ಶಾಹಿ ಹಾಗೂ ಮತಗಟ್ಟೆ ಕಾಣುವಂತೆ ಸೆಲ್ಫಿ ತೆಗೆದು ಜಿಲ್ಲಾ ಸ್ವೀಪ್ ಸಮಿತಿಗೆ ಕಳಿಸಿದರೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ಘೋಷಿಸಿದರು. ಯಾವುದೇ ಆಸೆ,ಆಮಿಷಗಳಿಗೆ ಒಳಗಾಗದೇ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಬೇಕು
ಎಫ್.ಬಿ.ಕಣವಿ, ರಾಮು ಮೂಲಗಿ, ಪ್ರಕಾಶ ಕಂಬಳಿ, ಬಾಬಾಜಾನ್ ಮುಲ್ಲಾ ಮತ್ತು ತಂಡದವರು ಚುನಾವಣಾ ಜಾಗೃತಿ ಗೀತೆಗಳನ್ನು ಹಾಡಿದರು.