ಹುಬ್ಬಳ್ಳಿ : ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ದೀನದಯಾಳ್ ಜಿ ಅವರ ಚಿಂತನೆ, ಮೋದಿಯವರ ಸಾಧನೆ ಹಾಗೂ ಬಿಜೆಪಿ ಸಾಧನೆಯ ಕುರಿತು ಕಲಾವಿದರ ಕುಂಚದಿಂದ ಅರಳಿದ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಬಿಜೆಪಿ ಸಾಧನೆ ಹಾಗೂ ನಾಯಕರ ಚಿತ್ರ ಪ್ರದರ್ಶನಕ್ಕೆ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೋವಿಂದ್ ಕಾರಜೋಳ, ಜಗದೀಶ್ ಶೆಟ್ಟರ್, ಡಿ.ಕೆ.ಅರುಣಾ, ಮಹೇಶ ತೆಂಗಿನಕಾಯಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಚುನಾವಣೆ ಹಿನ್ನೆಲೆ ರಾಜ್ಯಕಾರ್ಯಕಾರಿಣಿ ಸಭೆ : ಕಾರಜೋಳ
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕೊರೊನಾದಿಂದ ಬಹಳಷ್ಟು ವಿಳಂಬವಾಗಿದೆ. ಇದೀಗ ದೇಶದ ಜನತೆಗೆ ಸ್ಪಷ್ಟವಾದ ಸಂದೇಶ ಕೊಡುವ ಉದ್ದೇಶದಿಂದ ಮತ್ತು ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿವೆ ಎಂದು ಸಚಿವ ಗೋವಿಂದ್ ಕಾರಜೋಳ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಒಂದು ವರ್ಷ ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸಗಳು, ಯೋಜನೆಗಳು, ಅಭಿವೃದ್ಧಿ ಹೆಜ್ಜೆಗಳ ಬಗ್ಗೆ ದೇಶದ ರಕ್ಷಣೆ ಬಗ್ಗೆ ಎಲ್ಲ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಹೇಳಿದ್ದು ಹೀಗೆ..
ಪ್ರಸ್ತುತವಾದಂತಹ ರಾಜಕೀಯ ವಿದ್ಯಮಾನ, ರಾಷ್ಟ್ರೀಯ, ರಾಜ್ಯ ಮಹತ್ವದ ವಿಷಯ ಮತ್ತು ಸರ್ಕಾರಕ್ಕೆ ಸಲಹೆ, ಸೂಚನೆ ನೀಡಲು ಬೇಕಾದ ಕ್ರಮಗಳ ಕುರಿತಂತೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲಬೇಕಾಗಿತ್ತು. ಆದರೆ, 11 ಸ್ಥಾನಗಳನ್ನು ಮಾತ್ರ ಜಯಗಳಿಸಿದ್ದೇವೆ. ಹಿಂದಿನ ವಿಪ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದೇವೆ.
ಕಾಂಗ್ರೆಸ್ 14 ಸ್ಥಾನ ಗೆದ್ದಿದ್ದರು. ಈಗ 11 ಸ್ಥಾನಕ್ಕೆ ಇಳಿದಿದ್ದಾರೆ. ಆದರೂ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಸೋಲಾದ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಪರಾಮರ್ಶೆ ಮಾಡಲಾಗುವುದು ಎಂದರು.
ಸಿಎಂ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬದಲಾವಣೆ ವಿಚಾರ ಎಲ್ಲಿಂದ ಬಂದಿದೆ ಎಂದು ನನಗೆ ಗೊತ್ತಿಲ್ಲ. ಈಗಾಗಲೇ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.