ಹುಬ್ಬಳ್ಳಿ: ಸಿದ್ದರಾಮಯ್ಯ ಮತ್ತು ಡಿಕೆಶಿ ಕೇವಲ ಫೋಟೋ ಗೆಳೆಯರು. ದೆಹಲಿಗೆ ಹೋದಾದ ಮಾತ್ರ ಒಂದಾಗಿರುತ್ತಾರೆ. ರಾಹುಲ್, ಸೋನಿಯಾ ಗಾಂಧಿ ಎದುರು ಕೈ ಕುಲಾಯಿಸುತ್ತಾರೆ ಅಷ್ಟೇ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು.
ನಗರದಲ್ಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇದೆ. ಆದ್ರೆ ಹೊರಗೆ ಇಬ್ಬರೂ ಒಂದಾಗಿರುವಂತೆ ನಟಿಸುತ್ತಾರೆ ಎಂದು ಹೇಳಿದರು.
ಅವರ ಊರಿನ ತಗ್ಗು ಗುಂಡಿ ಮೊದಲು ನೋಡಿಕೊಳ್ಳಲಿ: ಹುಬ್ಬಳ್ಳಿ ತಗ್ಗು ಗುಂಡಿಗಳ ನಗರ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಕುಮಾರ್ ಅವರ ಕ್ಷೇತ್ರದಲ್ಲಿ ಒಮ್ಮೆ ಪ್ರಯಾಣ ಮಾಡಿದ್ರೆ ದೇಹದ ಭಾಗಗಳನ್ನು ಮುಟ್ಟಿ ನೋಡಿಕೊಳ್ಳಬೇಕು. ಮೊದಲು ಅವರ ಪರಿಸ್ಥಿತಿಯನ್ನು ಅವರು ನೋಡಿಕೊಳ್ಳಲಿ ಎಂದರು.
ಕಾಂಗ್ರೆಸ್ ಹಗಲು ಕನಸು ಕಾಣುತ್ತಿದೆ: ಪ್ರಹ್ಲಾದ್ ಜೋಶಿ, ಶೆಟ್ಟರ್ ಹುಬ್ಬಳ್ಳಿಯನ್ನು ಅಭಿವೃದ್ಧಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಗಲುಕನಸು ಕಾಣುತ್ತಿದೆ. ಎಲ್ಲಾ ಚುನಾವಣೆಯಲ್ಲಿ ನಾವೇ ಗೆಲ್ತೀವಿ ಅಂತಾರೆ. ಆದ್ರೆ ಎಲ್ಲೂ ಗೆದ್ದಿಲ್ಲ ಎಂದು ಲೇವಡಿ ಮಾಡಿದರು.
ಉಸ್ತುವಾರಿ ನೇಮಕ: ನಷ್ಟದಲ್ಲಿರುವ ಸಾರಿಗೆ ಇಲಾಖೆಯನ್ನು ಮೇಲೆತ್ತುವ ಕೆಲಸ ಮಾಡುತ್ತೇನೆ. ಉಸ್ತುವಾರಿ ಸಚಿವರ ನೇಮಕ ಕೆಲವೊಂದು ಕಡೆ ಆಗಬೇಕು, ಅದು ಆಗುತ್ತೆ ಎಂದರು.
ಸಚಿವರಿಂದ ಕೊರೊನಾ ನಿಯಮ ಉಲ್ಲಂಘನೆ: ಇದೇ ವೇಳೆ, ಕೊರೊನಾ ಮೂರನೇ ಅಲೆ ಭೀತಿ ಇದೆ ಎಂದು ಹೇಳುವ ಸಚಿವ ಶ್ರೀರಾಮುಲು ಅವರೇ ಜನರನ್ನು ಗುಂಪು ಗುಂಪಾಗಿ ಕರೆದುಕೊಂಡು ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.