ಹುಬ್ಬಳ್ಳಿ: ನಷ್ಟದ ಸುಳಿಯಲ್ಲಿ ಸಿಲುಕಿರುವ ವಾಯವ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಹೊಸ - ಹೊಸ ಆಫರ್ಗಳನ್ನು ಘೋಷಣೆ ಮಾಡಿ, ತನ್ನತ್ತ ಸೆಳೆಯುತ್ತಿದೆ. ವಾರಾಂತ್ಯ ಹಾಗೂ ರಜೆ ದಿನಗಳ ವಿಶೇಷ ಪ್ಯಾಕೇಜ್ ಟೂರ್ ಬಸ್ಗೆ ಸಾರ್ಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈ ವ್ಯವಸ್ಥೆಯನ್ನು ಇತರ ಸ್ಥಳಗಳಿಗೂ ವಿಸ್ತರಿಸುವಂತೆ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುರ್ಡೇಶ್ವರ, ಬಾದಾಮಿ ಹಾಗೂ ಜೋಗ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ.
![hubli](https://etvbharatimages.akamaized.net/etvbharat/prod-images/kn-hbl-04-nwkrtc-spl-tour-packeg-av-7208099_22072021194552_2207f_1626963352_1091.jpg)
ಸಾರಿಗೆ ಸಂಸ್ಥೆಯ ಸಂಚಾರ ಹಾಗೂ ಪ್ರವಾಸಿ ತಾಣಗಳಿಗೆ ಹೋಗುವ ಜನರ ಸಂಖ್ಯೆ ಕಡಿಮೆಯಾದ ಹಿನ್ನೆಲೆ, ಸಾರಿಗೆ ಸಂಸ್ಥೆ ವತಿಯಿಂದ ಪ್ರವಾಸಿ ತಾಣಗಳ ಸಂಚಾರಕ್ಕೆ ಒನ್ ಡೇ ವಿಶೇಷ ಬಸ್ ಸಂಚಾರ ಆರಂಭಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಯತ್ನ ನಡೆದಿದೆ. ಈ ವಿಶೇಷ ಬಸ್ಗಳು ಪ್ರತಿ ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ.
"ಚಾಲುಕ್ಯ ದರ್ಶಿನಿ"
ಈ ಬಸ್ ಬೆಳಗ್ಗೆ 7-30ಕ್ಕೆ ಹುಬ್ಬಳ್ಳಿಯಿಂದ ಹೊರಟು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ವಿಶ್ವ ಪ್ರಸಿದ್ದ "ಮೇಣ ಬಸದಿ" ಗುಹಾಂತರ ದೇವಾಲಯಗಳು, ಕಲ್ಯಾಣಿ ವೀಕ್ಷಣೆ, ಬನಶಂಕರಿ ದೇವಸ್ಥಾನ ದರ್ಶನ ಮುಗಿಸಿಕೊಂಡು ಶಿವಯೋಗ ಮಂದಿರ ತಲುಪುತ್ತದೆ. ಅಲ್ಲಿ ವೀರಶೈವ ವಟುಗಳ ಸಂಸ್ಕೃತ ಪಾಠಶಾಲೆ ಮತ್ತು ವಿಭೂತಿ ತಯಾರಿಕೆ ಕೇಂದ್ರ ಕರೆದೊಯ್ಯಲಾಗುತ್ತದೆ. ಬಳಿಕ ವಿಶ್ವದಲ್ಲಿಯೇ ಎರಡನೇ ಬೃಹತ್ ತೇರಿನ ದರ್ಶನಕ್ಕೆ ಕರೆದುಕೊಂಡು ಹೋಗುಲಾಗುತ್ತದೆ. ಜೊತೆಗೆ ಅಲ್ಲಿಯೇ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದಿಂದ "ದಕ್ಷಿಣ ಕಾಶಿ" ಮಹಾಕೂಟೇಶ್ವರ ದರ್ಶನ, ಪಟ್ಟದಕಲ್ಲು ಬೃಹತ್ ಬಸವಣ್ಣ ಶಿಲಾ ಮೂರ್ತಿ ದರ್ಶನ ಮತ್ತು ಐಹೊಳೆಯಲ್ಲಿ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮುಗಿಸಿಕೊಂಡು ಹುಬ್ಬಳ್ಳಿಗೆ ಸಂಜೆ 7-30ಕ್ಕೆ ಆಗಮಿಸುತ್ತದೆ. ಪ್ರತಿಯೊಂದು ಸ್ಥಳ ವೀಕ್ಷಣೆಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದ್ದು, ಪ್ರಯಾಣ ದರ 320 ರೂಪಾಯಿಯಾಗಿದೆ.
![hubli](https://etvbharatimages.akamaized.net/etvbharat/prod-images/kn-hbl-04-nwkrtc-spl-tour-packeg-av-7208099_22072021194552_2207f_1626963352_709.jpg)
ಮುರ್ಡೇಶ್ವರ
ಈ ಬಸ್ ಬೆಳಗ್ಗೆ 7ಕ್ಕೆ ಹುಬ್ಬಳ್ಳಿಯಿಂದ ಹೊರಟು ಶಿರಸಿಯ ಮಾರಿಕಾಂಬಾ ದೇವಸ್ಥಾನ ಮತ್ತು ಇಡಗುಂಜಿ ಮಹಾಗಣಪತಿ ದೇವಸ್ಥಾನ ದರ್ಶನ ಮುಗಿಸಿಕೊಂಡು ಮಧ್ಯಾಹ್ನ ಮುರ್ಡೇಶ್ವರ ತಲುಪುತ್ತದೆ. ಅಲ್ಲಿ ವಿಶ್ವವಿಖ್ಯಾತ ಬೃಹತ್ ಗೋಪುರ ವೀಕ್ಷಣೆ, ಬೆಟ್ಟದ ಮೇಲಿನ ಭವ್ಯ ಶಿವನ ಮೂರ್ತಿ ದರ್ಶನ, ಭೂ-ಜಲ ಸಂಗಮದ ವಿಹಂಗಮ ಪ್ರಕೃತಿ ಸೌಂದರ್ಯ ವೀಕ್ಷಣೆ, ಬೀಚ್ನಲ್ಲಿ ಮನರಂಜನೆ, ಊಟೋಪಚಾರಕ್ಕೆ ಸಾಕಷ್ಟು ಕಾಲಾವಕಾಶವಿರುತ್ತದೆ. ಸಂಜೆ 4ಕ್ಕೆ ಮುರ್ಡೇಶ್ವರದಿಂದ ಹೊರಟು ಹೊನ್ನಾವರ ಬಳಿ ಇಕೋ ಬೀಚ್ ವೀಕ್ಷಣೆ ಮಾಡಿಕೊಂಡು, ಸಂಜೆ 9ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ 530 ರೂಪಾಯಿಯಾಗಿದೆ.
![hubli](https://etvbharatimages.akamaized.net/etvbharat/prod-images/kn-hbl-04-nwkrtc-spl-tour-packeg-av-7208099_22072021194552_2207f_1626963352_20.jpg)
ಜೋಗ ಜಲಪಾತ ವೀಕ್ಷಣೆ
ಮಳೆಗಾಲದ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ಸಾಕಷ್ಟು ಬೇಡಿಕೆಯಿದ್ದು, ವಾರಾಂತ್ಯದ ದಿನಗಳಂದು ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಈ ಬಸ್ ಶನಿವಾರ ಮತ್ತು ರವಿವಾರ ಬೆಳಗ್ಗೆ 7-30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಮಾರ್ಗ ಮಧ್ಯದಲ್ಲಿ ಶಿರಸಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12-30ಕ್ಕೆ ಜೋಗ ತಲುಪುತ್ತದೆ. ಅಲ್ಲಿ ಸ್ಥಳ ವೀಕ್ಷಣೆ, ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶ ಇರುತ್ತದೆ. ಸಂಜೆ 4-30ಕ್ಕೆ ಜೋಗದಿಂದ ಬಿಟ್ಟು ರಾತ್ರಿ 9ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಪ್ರಯಾಣ ದರ 350ರೂಪಾಯಿಯಾಗಿದೆ.
![hubli](https://etvbharatimages.akamaized.net/etvbharat/prod-images/kn-hbl-04-nwkrtc-spl-tour-packeg-av-7208099_22072021194552_2207f_1626963352_615.jpg)
ಮುಂಗಡ ಬುಕ್ಕಿಂಗ್.
ಈ ವಿಶೇಷ ಬಸ್ಗಳಿಗೆ www.ksrtc.in ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಮತ್ತು ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿನ ಬುಕ್ಕಿಂಗ್ ಕೌಂಟರ್ಗಳಲ್ಲಿ ಮತ್ತು ಖಾಸಗಿ ಫ್ರಾಂಚೈಸಿ ಕೌಂಟರ್ಗಳಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೊನೆ ಕ್ಷಣದಲ್ಲಿ ಪ್ರವಾಸ ತೆರಳುವವರು ಈ ಬಸ್ ನಿರ್ವಾಹಕರಿಂದ ಟಿಕೆಟ್ ಪಡೆಯಬಹುದು. ಒಂದು ವೇಳೆ ಯಾವುದೇ ವಿಶೇಷ ಬಸ್ಗೆ ಪ್ರವಾಸಿಗರ ಸಂಖ್ಯೆ ನಿಗದಿಗಿಂತ ಹೆಚ್ಚಾದರೆ, ಅದೇ ದಿನ ಮತ್ತೊಂದು ವಿಶೇಷ ಬಸ್ ವ್ಯವಸ್ಥೆಯನ್ನೂ ಸಹ ಮಾಡಲಾಗುತ್ತದೆ.
ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ-ಖಾಸಗಿ ನೌಕರರು, ಸಂಘ-ಸಂಸ್ಥೆಗಳ 30ಕ್ಕಿಂತ ಹೆಚ್ಚಿನ ಜನರು ಒಟ್ಟಿಗೆ ತೆರಳಲು ಇಚ್ಚಿಸಿದರೆ, ಅವರು ಬಯಸುವ ದಿನ ಮತ್ತು ಸಮಯಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಬಸ್ ನಿಲ್ದಾಣ ಅಧಿಕಾರಿಯನ್ನು 7760991662/7760991682 ಅಥವಾ ಘಟಕ ವ್ಯವಸ್ಥಾಪಕ 7760991677 /77609916678ರಲ್ಲಿ ಸಂಪರ್ಕಿಸಬಹುದು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.