ಹುಬ್ಬಳ್ಳಿ: ಸಿನಿಮಾದಲ್ಲಿ ಆತ ಖಳ ನಾಯಕ. ತನ್ನ ಖಡಕ್ ನಟನೆಯಿಂದ ಹೀರೋಗಳಿಗೆ ಸಿಂಹ ಸ್ವಪ್ನನಾಗಿ ಪ್ರೇಕ್ಷಕರಿಂದ ಬೈಗುಳ ತಿನ್ನುತ್ತಿದ್ದ ಆ ಖಳನಾಯಕ ಸದ್ಯ ನಿಜ ಜೀವನದಲ್ಲಿ ಜನರ ಪ್ರಾಣ ಉಳಿಸುವ ಜೀವದಾತನಾಗಿದ್ದಾನೆ. ಅಷ್ಟಕ್ಕೂ ಆತ ಮಾಡುತ್ತಿರುವ ಕಾರ್ಯವಾದರೂ ಏನು ಈ ಸ್ಟೋರಿ ನೋಡಿ
ಕೊರೊನಾ ಎರಡನೇ ಅಲೆಗೆ ಅದೆಷ್ಟೋ ಜನರು ಆಕ್ಸಿಜನ್ ಇಲ್ಲದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಪ್ರಾಣ ಕಾಪಾಡಲು ವಾಯುಪುತ್ರನಂತೆ ನಿಂತ ಬಾಲಿವುಡ್ ನಟ ಸೋನು ಸೂದ್. ಸೋನು ಸೂದ್ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಸ್ವಾಗ್ ಸಂಸ್ಥೆಯ ವತಿಯಿಂದ ಈಗ ಆಕ್ಸಿಜನ್ ಪೂರೈಸಲು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸೆಂಟರ್ ಮಾಡಿಕೊಂಡು ಜನ ಸೇವೆಗೆ ಮುಂದಾಗಿದ್ದಾರೆ.
ಹುಬ್ಬಳ್ಳಿಯ ಸಿದ್ಧಾರೂಢ ರೈಲ್ವೆ ನಿಲ್ದಾಣದಲ್ಲಿರುವ ಪೊಲೀಸ್ ಠಾಣೆಯಲ್ಲಿ ಸೆಂಟರ್ ಮಾಡಿಕೊಂಡು, ಹುಬ್ಬಳ್ಳಿಯಿಂದ 120 ಕಿಲೋ ವ್ಯಾಪ್ತಿಯ ಪ್ರತಿಯೊಂದು ಜಿಲ್ಲೆಗೂ ಈ ಸೇವೆ ಒದಗಿಸಲು ಮುಂದಾಗಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.
ಹುಬ್ಬಳ್ಳಿ ಕೇಂದ್ರದಲ್ಲಿ ಸದ್ಯ 20 ಆಕ್ಸಿಜನ್ ಸಿಲಿಂಡರ್ಗಳನ್ನು ಹಸ್ತಾಂತರ ಮಾಡಿದ್ದು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಈ ಆಕ್ಸಿಜನ್ ಸೇವೆ ಒದಗಿಸುವ ನಿಟ್ಟಿನಲ್ಲಿ, ಈ ಸೆಂಟರ್ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಹತ್ತಿರದ ಗೋವಾವರೆಗೂ ಆಕ್ಸಿಜನ್ ಸೇವೆ ನೀಡಲು ಈ ಟ್ರಸ್ಟ್ ಮುಂದಾಗಿದ್ದು, ಈ ಸೇವೆ ಸಂಪೂರ್ಣ ಉಚಿತವಾಗಿದೆ. ಕೊರೊನಾ ಒಂದನೇ ಅಲೆಯಿಂದಲೂ ಯುದ್ದೋಪಾದಿಯಲ್ಲಿ ಸಾರ್ವಜನಿಕರ ಸೇವೆಗೆ ಮುಂದಾಗಿರುವ ಖಳನಟ ಸೋನು ಸೂದ್ ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು, 7069999961, 8296857553, 9480800462, ಈ ನಂಬರಗಳಿಗೆ ಕರೆ ಮಾಡಿದರೆ ಸಾಕು ನಿಮಗೆ ತಕ್ಷಣವೇ ಆಕ್ಸಿಜನ್ ದೊರೆಯುತ್ತದೆ.
ಒಟ್ಟಿನಲ್ಲಿ ಕೇವಲ ಚಿತ್ರದಲ್ಲಿ ನಟನೆ ಮಾಡುವುದು ಅಷ್ಟೇ ಅಲ್ಲದೆ, ಅದೇ ಪ್ರೇಕ್ಷಕರ ಜೀವನ ಕಾಪಾಡಲು ಮುಂದಾಗಿರುವ ನಟ ಸೋನು ಸೂದ್ಗೆ ಧಾರವಾಡ ಜಿಲ್ಲೆಯ ಜನತೆಯ ವತಿಯಿಂದ ದೊಡ್ಡದೊಂದು ಸಲಾಂ.