ಹುಬ್ಬಳ್ಳಿ: ಲಾಕ್ಡೌನ್ನಿಂದ ತಾಯಿಯ ಅಂತಿಮ ದರ್ಶನ ಸಿಗದೇ ಮಗನೊಬ್ಬ ಕಣ್ಣೀರು ಹಾಕಿರುವ ಮನಕಲಕುವ ಘಟನೆ ನಡೆದಿದೆ. ವಯೋ ಸಹಜ ಕಾಯಿಲೆಯಿಂದ ಕೊನೆಯಸಿರೆಳೆದ ತಾಯಿಯ ಅಂತ್ಯಸಂಸ್ಕಾರಕ್ಕೆ ಮಗ ಬರುವ ಮುನ್ನವೇ ಅಂತ್ಯಸಂಸ್ಕಾರ ನಡೆದು ಹೋಗಿದೆ.
ಚೆನ್ನೈನ ನಿಸ್ಸಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ ನಗರದ ಸಮೀರ್ ಪುರೋಹಿತ್ ಎಂಬುವವರೇ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳದೇ ಯಾತನೆ ಅನುಭವಿಸಿದವರು.
ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮೀರ್ ಅವರ ತಾಯಿ ಆರೋಗ್ಯ ಸೋಮವಾರ ತೀರಾ ಹದಗೆಟ್ಟಿತ್ತು. ಹುಬ್ಬಳ್ಳಿಗೆ ಬರಲು ಪಾಸ್ಗಾಗಿ ಸಾಕಷ್ಟು ಪ್ರಯತ್ನ ಮಾಡಿದರು. ಲಾಕ್ಡೌನ್ನಿಂದಾಗಿ ಅವರಿಗೆ ಬೇಗ ಪಾಸ್ ಸಿಗಲಿಲ್ಲ. ಕೊನೆಗೆ ಟ್ವಿಟ್ಟರ್ನಲ್ಲಿ ತಮ್ಮ ತಾಯಿ ಆರೋಗ್ಯ ಗಂಭೀರವಾಗಿರುವುದನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ, ಹು- ಧಾ ಪೊಲೀಸ್ ಆಯುಕ್ತರು, ಚೆನ್ನೈನ ಪೊಲೀಸ್ ಕಮೀಷನರ್ಗೆ ಟ್ವೀಟ್ ಮಾಡಿದರು.
ರಾತ್ರಿಯಿಡೀ ಪಾಸ್ ಚಿಂತೆಯಲ್ಲಿದ್ದ ಅವರಿಗೆ ಬೆಳಗ್ಗೆ ಅವರ ಸಹೋದರ ಕರೆ ಮಾಡಿ ಅಮ್ಮ ತೀರಿಕೊಂಡಿದ್ದಾಗಿ ಹೇಳಿದರು. ನಂತರ 8 ಗಂಟೆಯ ಸುಮಾರಿಗೆ ಸ್ಥಳಿಯ ಆಡಳಿತಕ್ಕೆ ಆನ್ ಲೈನ್ ಅರ್ಜಿ ಹಾಕಿ ಟ್ವೀಟ್ ಪ್ರಭಾವದಿಂದ ಒಂದು ಗಂಟೆಯೊಳಗೆ ಪಾಸ್ ಸಿಕ್ಕಿದೆ.
ಬಳಿಕ ಮಡದಿ ಮಕ್ಕಳನ್ನು ಕರೆದುಕೊಂಡು ರಾತ್ರಿ ಹುಬ್ಬಳ್ಳಿಗೆ ತಲುಪಿದ್ದಾರೆ. ಬರುವುದು ತಡವಾಗುತ್ತದೆ ಎಂದು ಸಂಬಂಧಿಗಳು ಅಂತ್ಯಸಂಸ್ಕಾರ ಮಾಡಿದ್ದಾರೆ. ಕೊನೆಯದಾಗಿ ತಾಯಿ ಮುಖವನ್ನು ನೋಡಲಾಗಲಿಲ್ಲ ಎಂದು ಮಗ ಕಣ್ಣೀರು ಹಾಕಿದ್ದಾರೆ.