ಹುಬ್ಬಳ್ಳಿ: ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ಕೊಡಗಿನಲ್ಲಿ ಆದಂತಹ ಸ್ಥಿತಿ ಈಗ ಉತ್ತರ ಕರ್ನಾಟಕದಲ್ಲಿ ನಿರ್ಮಾಣವಾಗಿದ್ದು, ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯಬೇಕಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನೆರೆ ಪ್ರವಾಹದಿಂದ ಮನೆ, ಶಾಲೆ, ರಸ್ತೆ, ಸೇತುವೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು 1.5 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದು, ಸರ್ಕಾರ ಮೂಲ ಸೌಕರ್ಯ ಸೌಲಭ್ಯಗಳಿಗೆ ಆದ್ಯತೆ ಕೊಟ್ಟು ಅಭಿವೃದ್ಧಿಪಡಿಸಬೇಕಿದೆ ಎಂದು ಹೇಳಿದರು.
ದಾನಿಗಳಿಂದಲೂ ಉತ್ತಮ ನೆರವು ಸಿಗುತ್ತಿದ್ದು, ಪ್ರವಾಹದ ಹಾನಿಯ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಮಗ್ರವಾದ ವರದಿ ಕಳುಹಿಸಬೇಕು. ಕೇಂದ್ರಕ್ಕೆ ವರದಿ ಬಂದ ಬಳಿಕ ಕೇಂದ್ರದ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಬಳಿಕ ಹುಬ್ಬಳ್ಳಿಯ ಹೊಸೂರ ಕ್ರಾಸಿನ ಕೆನರಾ ಹೋಟೆಲ್ನಲ್ಲಿ ಸಂತ್ರಸ್ತರಿಗಾಗಿ ಸಂಗ್ರಹಿಸಿರುವ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ವಿತರಿಸಲು ಬೆಳಗಾವಿಗೆ ತೆರಳಿದರು.
ಹುಬ್ಬಳ್ಳಿ ಹೋಟೆಲ್ ಉದ್ಯಮಿಗಳಿಂದ ಸುಮಾರು 6 ಲಕ್ಷ ಮೌಲ್ಯದ ಬಟ್ಟೆ, ಆಹಾರ ಪದಾರ್ಥಗಳು ನೆರವು ನೀಡಿದ್ದು, ಅವುಗಳನ್ನು ಇಂದು ವಿತರಣೆ ಮಾಡಲಿದ್ದಾರೆ.