ಹುಬ್ಬಳ್ಳಿ: ರೇವಡಿಹಾಳ ಗ್ರಾಮದಲ್ಲಿ ಬಡವರಿಗೆ ಸೇರಬೇಕಾದ ಸರ್ಕಾರದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಹಕರಿಸಿದ್ದಾರೆ ಆರೋಪಿಸಿ ದೇವರಗುಡಿಹಾಳ ಗ್ರಾಮ ಪಂಚಾಯತಿ ಪಿಡಿಒ ನಾಗರಾಜ ದೊಡ್ಡಮನಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ರೇವಡಿಹಾಳ ಗ್ರಾಮಸ್ಥರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೇವಡಿಹಾಳ ಗ್ರಾಮದ ಬ್ಲಾಕ್ ನಂ 24, 73, 84/1 ರಲ್ಲಿ 11 ಎಕರೆ 12 ಗುಂಟೆ ಜಮೀನಿನಲ್ಲಿ ಒಟ್ಟು 310 ಸರ್ಕಾರದ ನಿವೇಶನಗಳಲ್ಲಿ ಅನರ್ಹರು ಅಕ್ರಮವಾಗಿ ಕಟ್ಟಡ ಕಟ್ಟಲು ದೇವರಗುಡಿಹಾಳ ಗ್ರಾ.ಪಂ ಪಿ.ಡಿ.ಒ ನಾಗರಾಜ ದೊಡ್ಡಮನಿ ಕಾನೂನು ಬಾಹಿರವಾಗಿ ಸಹಕರಿಸಿ, ರೇವಡಿಹಾಳ ಗ್ರಾಮದ ವಸತಿರಹಿತ ಪೂರ್ಣ ಪ್ರಮಾಣದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಜೊತೆಗೆ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ನಿಮಯ ಬಾಹಿರವಾಗಿ ಮನೆ ಕಟ್ಟಿಕೊಳ್ಳಲು ರೇವಡಿಹಾಳ ಗ್ರಾಮದ ಶಂಕ್ರಪ್ಪನಿಗೆ ಪಿಡಿಒ ಸಹಕರಿಸಿ ಅನ್ಯಾಯವೆಸಗಿದ್ದು, ಕೂಡಲೇ ಪಿಡಿಒ ಅಮಾನತು ಮಾಡಬೇಕು. ಜೊತೆಗೆ ಅಕ್ರಮವಾಗಿ ಮನೆ ನಿರ್ಮಾಣದಲ್ಲಿ ಶಾಮೀಲಾದ ಶಂಕ್ರಪ್ಪ ಪೂಜಾರ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.