ಹುಬ್ಬಳ್ಳಿ: ಮಾಜಿ ಸಭಾಪತಿ ರಮೇಶ್ ಕುಮಾರ್ ಅವರು ಸದನದಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ನಗರದಲ್ಲಿ ಪ್ರತಿಭಟನೆ ನಡೆಸಿತು.
ಇಲ್ಲಿನ ಮೂರು ಸಾವಿರ ಮಠದ ಆವರಣದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ಮಾಡಿದ ಮಹಿಳಾ ಮೋರ್ಚಾ, ರಮೇಶ್ ಕುಮಾರ್ ಹೇಳಿಕೆ "ಅತ್ಯಂತ ದುಃಖಕರ, ದುರದೃಷ್ಟವಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ. ಸದನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದಾದರೆ ಅವರೊಂದಿಗಿರುವ ಮಹಿಳೆಯರೊಂದಿಗೆ ಯಾವ ರೀತಿ ವರ್ತಿಸುತ್ತಾರೆ. ಕೂಡಲೇ ರಮೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಧಾರವಾಡ ಗ್ರಾಮಾಂತರ ಜಿಲ್ಲೆಯ ಮಹಿಳಾ ಮೋರ್ಚಾ ಅಧ್ಯಕ್ಷ ಚೈತ್ರಾ ಶಿರೂರ, ಸುಜಾತಾ ಕಳ್ಳಿಮನಿ, ರೂಪಾ ಶೆಟ್ಟಿ, ಮೀನಾಕ್ಷಿ ಒಂಟಮೊರೆ, ಅಕ್ಕಮಹಾದೇವಿ ಹೆಗಡೆ, ಉಮಾ ಮುಕ್ಕುಂದ ಸೇರಿದಂತೆ ಮುಂತಾದವರು ಇದ್ದರು.
ಇದನ್ನೂ ಓದಿರಿ: ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು ಕಿಡಿಕಾರಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು
ಸದನದಲ್ಲಿ ಮಾತನಾಡುತ್ತಿದ್ದ ವೇಳೆ ರಮೇಶ್ ಕುಮಾರ್ ಅತ್ಯಾಚಾರ ಆದಾಗ ತಡೆಯಲು ಸಾಧ್ಯವಾಗದಿದ್ದರೆ ಎಂಜಾಯ್ ಮಾಡಿಬಿಡಬೇಕು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅವರು ಕ್ಷಮೆಯಾಚನೆ ಮಾಡಿದ್ದು, ತಮ್ಮ ಹೇಳಿಕೆಯಿಂದ ಹೆಣ್ಣು ಮಕ್ಕಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದರು.