ಧಾರವಾಡ: ಬಾಬರಿ ಮಸೀದಿ ಧ್ವಂಸ ಮರುಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪಿಎಫ್ಐ ಪ್ರಕರಣ ದಾಖಲಿಸಿದ್ದು ಮೂರ್ಖತನದ ಪರಮಾವಧಿ. ಈ ಮೂಲಕ ಕೋಮುಗಲಭೆಗೆ ಮುಂದಾಗಿದೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತಿಹಾಸವನ್ನು ಮಕ್ಕಳಿಗೆ ತಿಳಿಸಿ ಹೇಳುವುದರಲ್ಲಿ ತಪ್ಪೇನಿದೆ. ಅದು ಪ್ರಚೋದನೆಗೆ ಕಾರಣ ಅಲ್ಲ. ಬಾಬರ್ ಬಂದು ದೇವಸ್ಥಾನ ಒಡೆದು ಉರುಳಿಸಿರುವುದು ಸತ್ಯವಾದ ಸಂಗತಿ. ನಡೆದ ಸಂಗತಿಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವುದರಲ್ಲಿ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪ್ರಭಾಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೋಮು ಪ್ರಚೋದನೆಗೆ ಮುಂದಾಗಿದೆ. ಇದನ್ನು ಸಹಜ ಘಟನೆಯೆಂದು ತೆಗೆದುಕೊಳ್ಳಬೇಕೇ ವಿನಃ ಕೋಮುಭಾವನೆ ತೆಗೆದುಕೊಳ್ಳಬಾರದು. ಸ್ವಾತಂತ್ರ್ಯದ ನಂತರ ಬೇಕಾದಷ್ಟು ಮಂದಿರಗಳನ್ನು ಕಾಶ್ಮೀರದಲ್ಲಿ ಕೆಡವಿದ್ದಾರೆ. ಹಾಗಾದರೆ ಅದು ಪ್ರಚೋದನೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆಗಿರುವುದೇನು?
ಬಂಟ್ವಾಳದ ವಿವೇಕಾನಂದ ಶಾಲೆಯೊಂದರಲ್ಲಿ ವಾರ್ಷಿಕೋತ್ಸವದ ನಿಮಿತ್ತವಾಗಿ 1992ರ ಡಿಸೆಂಬರ್ 6ರಂದು (ಬಾಬರಿ ಮಸೀದಿ ಧ್ವಂಸ ಪ್ರಕರಣ) ನಡೆದ ಘಟನೆಯನ್ನು ಮರುಸೃಷ್ಟಿ ಮಾಡಿ ಮಕ್ಕಳು ಅಭಿನಯಿಸಿದರು. ಈ ಶಾಲೆಯ ಮಾಲೀಕರು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್. ಈ ಘಟನೆಯಿಂದಾಗಿ ಮಕ್ಕಳಿಗೆ ಕೋಮು ಪ್ರಚೋದನೆ, ಕೋಮುಗಲಭೆ ಕಾರಣ, ವಿದ್ಯಾರ್ಥಿಗಳಿಗೆ ತಪ್ಪು ತಿಳಿವಳಿಕೆ ನೀಡುವಂತಾಗುತ್ತದೆ ಎಂದು ಪಿಎಫ್ಐ ಸಂಘಟನೆ ಪ್ರಭಾಕರ್ ವಿರುದ್ಧ ಪ್ರಕರಣ ದಾಖಲಿಸಿದೆ.