ಹುಬ್ಬಳ್ಳಿ: ಕುಂದಗೋಳ ಕ್ಷೇತ್ರ ಉಳಿದೆಡೆಗಿಂತ ಭಿನ್ನ. ನಾ ಅಂದ್ರೇ ಯಾರೇ ಇರಲಿ, ಅವರಿಗೆ ಬುದ್ಧಿ ಕಲಿಸೋ ಮತದಾರರು ಇಲ್ಲಿದ್ದಾರೆ. ಸತತ ಎರಡು ಬಾರಿ ಗೆದ್ದ ಇತಿಹಾಸ ಇರೋದು ಕಂಬಳಿಯವರಿಗೆ ಮಾತ್ರ. ಆದರೆ, ಶಿವಳ್ಳಿ ಅದನ್ನ ಬ್ರೇಕ್ ಮಾಡಿ 2018ರಲ್ಲಿ ಮತ್ತೆ ಎಲೆಕ್ಟಾದರು. ಅದಕ್ಕೆ ಕಾರಣ ಜನರ ಜತೆಗಿನ ನಿರಂತರ ಸಂಪರ್ಕ. ತಮ್ಮ ಮನೆಗೆ ಯಾರೇ ಬಂದ್ದರೂ ಅವರಿಗೆ ನಿತ್ಯ ದಾಸೋಹ. ಬರೋ ಜನರಿಗೆ ಕೆಲಸ ಮಾಡಿಕೊಡೋದು, ಸ್ಪಂದಿಸೋ ಗುಣ ಇರೋದ್ರಿಂದ ಜನ ಕೈಹಿಡಿದರು. ಮತ್ತೆ ಆಯ್ಕೆ ಆಗೋ ವಿಶ್ವಾಸ ಇರಲಿಲ್ಲ. ಆದರೆ, ವಿರೋಧಿಗಳು ಎಷ್ಟೇ ಷಡ್ಯಂತ್ರ ಮಾಡಿದರೂ ಜನ ಆಯ್ಕೆ ಮಾಡಿದರು. ಈಗ ಕುಂದಗೋಳಕ್ಕೆ 4 ದಶಕದ ಬಳಿಕ ಸಚಿವ ಸ್ಥಾನ ಒಲಿದು ಬಂದಿತ್ತು.
ಸಿ. ಎಸ್ ಶಿವಳ್ಳಿ ಮಾಸ್ ಇಮೇಜ್ ಇರುವ ನಾಯಕ :
ಬಂಗಾರಪ್ಪನವರ ಗಡಿಯಲ್ಲಿ ಪಳಗಿದ ಸಿಎಸ್. ಶಿವಳ್ಳಿ ಮಾಸ್ ಲೀಡರ್ ಆಗಲು ಹತ್ತಾರು ಕಾರಣಗಳಿವೆ. ರಾಜಕೀಯ ಏನೇ ಇದ್ರೂ ವ್ಯಕ್ತಿಗತ ಹಗೆತನ ಮಾಡದ ರಾಜಕಾರಣಿ. ಮತ ಹಾಕದವರ ಮನೆಯಲ್ಲಿ ಸಾವು- ನೋವಾದ್ರೇ ಮೊದಲು ಬರ್ತಿದ್ದ ಜನಾನುರಾಗಿ. ಮದುವೆ, ಮುಂಜವಿ, ಸಾವು-ನೋವು ಏನೇ ಇದ್ದರು ಬಡವರು ನಿತ್ಯ ಮನೆಗೆ ಬರುತ್ತಿದ್ದರು. ಆದರೆ, ಹಾಗೇ ಬಂದವರಿಗೆ ಯಾವತ್ತೂ ನಿರಾಶೆ ಮಾಡಿರಲಿಲ್ಲ. ಬರೀಗೈಲಿ ಕಳುಹಿಸಿದ ಉದಾಹರಣೆಗಳಿಲ್ಲ. ಶಾಸಕನಾಗಿ ಉದ್ಧಟತನ ತೋರಿಸುತ್ತಿರಲಿಲ್ಲ. ‘ಯಾರು ಕೆರಿಸ್ಯಾಗ್ ರೊಟ್ಟಿ ಇಲ್ಲ ಅಂತ ಹೀಯಾಳಿಸದ್ರೋ ’ ಅವರ ಮುಂದೆಯೇ ಶಾಸಕರಾಗಿದ್ದರು. ಮೂದಲಿಸಿದವರ ಮುಂದೆ ತಲೆ ಎತ್ತಿ ನೋಡುವಂತೆ ಶಾಸಕನಾಗಿ ಬೀಗಿದ್ದರು ಸಿ.ಎಸ್ ಶಿವಳ್ಳಿ. ಮೂದಲಿಸಿದ ವ್ಯಕ್ತಿ ಸತ್ತಾಗ ಅವರ ಮನೆಗೇ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಈ ರೀತಿಯ ಗುಣವೇ ಅವರು ರಾಜಕೀಯದಲ್ಲಿ ಭವಿಷ್ಯ ಕಲ್ಪಸಿಕೊಳ್ಳಲು ಸಾಧ್ಯವಾಗಿತ್ತು. ಮನೆಯಲ್ಲಿ ನಿತ್ಯ 100ರಿಂದ 500 ಜನ ಸೇರುತ್ತಿದ್ದರು. ಹಾಗೇ ಮನೆಗೆ ಬಂದವರಿಗೆ ಕೆಲಸ ಮಾಡಿಕೊಟ್ಟಿದ್ದಲ್ಲದೇ, ಹೊಟ್ಟೆ ತುಂಬ ಊಟ ಹಾಕಿ, ಕೈಯಲ್ಲಿ ಹಣವಿರದಿದ್ದರೇ ಅವರಿಗೆ ಹಣ ಕೊಟ್ಟು ಕಳುಹಿಸುತ್ತಿದ್ದ ಕರುಣಾಳು ಶಿವಳ್ಳಿ.
ಸಚಿವರ ತಂದೆ ಸತ್ಯಪ್ಪ ಶಿವಳ್ಳಿ ಶಿವನ ಪರಮ ಭಕ್ತ :
ಸಚಿವ ಶಿವಳ್ಳಿಯವರ ತಂದೆ ಸತ್ಯಪ್ಪ ಶಿವನ ಭಕ್ತ. ಬೆಳಗು ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಓಂನಮ: ಶಿವಾಯ, ಶಿವಾಯ ನಮ: ಅಂತಾ ಬಾಯ್ತುಂಬ ಹೇಳೋರು. ತಮ್ಮ ಊರ ಮುಂದಿನ ಹೊಲದಲ್ಲಿ ಬನ್ನಿಗಿಡಕ್ಕೆ ಪಾಟ್ ಕಟ್ಟಿ ಮಧ್ಯಾಹ್ನ ಹೋಗಿ, ಹಕ್ಕಿಗಳಿಗೆ ನೀರು ಇಡುತ್ತಿದ್ದ ಪಕ್ಷಿಪ್ರೇಮಿ ಸತ್ಯಪ್ಪ. ಅವರ ಈ ಗುಣವೇ, ತಂದೆಯ ಪುಣ್ಯವೇ ಮಗನಿಗೆ ಒಳೀತು ಮಾಡಿದೆ ಅಂತ ಹೇಳೋರಿದಾರೆ. ಯಾರದೋ ಮನೆಗೆ ಬೆಂಕಿ ಬಿದ್ದಾಗ ಅದರಲಲ್ಲಿ ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳುವ ಕುಂತತ್ರಿ ರಾಜಕಾರಣಿ ಅಲ್ಲ ಶಿವಳ್ಳಿ.
ವಿಶ್ವಗುರು ಬಸವಣ್ಣನ ಅನುಯಾಯಿ ಸಿ.ಎಸ್ ಶಿವಳ್ಳಿ :
ವಿಶ್ವಗುರು ಬಸವಣ್ಣನ ಅನುಯಾಯಿ. ಅದಕ್ಕಾಗೇ 1999ರಿಂದ ಶಾಸಕನಾಗಿ ಇರದಿದ್ದರೂ ಪ್ರತಿವರ್ಷ ಬಸವ ಜಯಂತಿಯಂದೇ ಸರ್ವಧರ್ಮ ಸಾಮೂಹಿಕ ವಿವಾಹ ಮಾಡಿಕೊಂಡೇ ಬರುತ್ತಿದ್ದರು ಶಿವಳ್ಳಿ. ಅಪ್ಪ ಅವರಿವರಿಂದ ಸಾಲಪಡೆದು ಮನೆತನ ನಡೆಸುತ್ತಿದ್ದರು. ತಾಯಿ ಗಂಗಮ್ಮ ಬೇರೆಯವರ ಮನೆಯಿಂದ ಕಡಾ (ಎರವಲು) ಹಿಟ್ಟು, ಅಕ್ಕಿ ಪಡೆದು ಮಕ್ಕಳ ಹೊಟ್ಟೆ ತುಂಬಿಸಿದ್ದ ದಿನಗಳು ಶಿವಳ್ಳಿಯವರಿಗೆ ಬದುಕನ್ನ ನೋಡುವ ದೃಷ್ಟಿಕೋನವನ್ನ ಬದಲಿಸಿದ್ದವು. ತಾನು ಉಪವಾಸವಿದ್ರೂ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು ಗಂಗಮ್ಮ. ಕಷ್ಟದ ದಿನಗಳನ್ನೇ ಹೆಚ್ಚಾಗಿ ನೋಡಿದ್ದರು ಸತ್ಯಪ್ಪ. ಮಗ ಶಾಸಕನಾದಾಗ ಅದನ್ನ ನೋಡೋಕೆ ಒಂದೇ ವರ್ಷ ಇದ್ದರು ಅನ್ಸುತ್ತೆ. ತಾಯಿ ಮಾತ್ರ ಶಾಸಕನಾಗಿರೋದನ್ನ ಕಣ್ಣಾರೆ ಕಂಡಿದ್ದರೂ, ಹಾಸಿಗೆ ಹಿಡಿದಿದ್ದರು. ಆ ಎರಡು ಜೀವಗಳು ಮಗ ಸಚಿವನಾಗಿದ್ದನ್ನ ನೋಡಲಾಗಿರಲಿಲ್ಲ.
ರಾಜಕಾರಣಿಯಾಗಿ ಸಿ ಎಸ್ .ಶಿವಳ್ಳಿ ಟೀಕಾತೀತರೇನಲ್ಲ :
ರಾಜಕಾರಣಿಯಾಗಿ ಶಿವಳ್ಳಿ ಟೀಕಾತೀತರೇನಲ್ಲ. ಅದನ್ನ ಅವರೇ ಎಷ್ಟೋ ಸಾರಿ ತಮ್ಮ ಭಾಷಣಗಳಲ್ಲಿ ಹೇಳ್ಕೊಂಡಿದ್ದಾರೆ. ನಾನೊಬ್ಬ 'ಎಮ್ಮೆ-ಎಲ್ಲೇ.. ಆದ್ರೇ, ಗೊಡ್ಡೆಮ್ಮೆ ಅಲ್ಲ ಹಾಲು ಕೊಡುವ ಎಮ್ಮೆ ಎಂದಿದ್ದರು. ರಾಜಕೀಯದಲ್ಲಿ ತಾನೇನು ಸಾಚಾ ಅಲ್ಲ ಅನ್ನೋದು ಅವರ ಮಾತಲ್ಲೇ ವ್ಯಕ್ತವಾಗುತ್ತಿತ್ತು. ಜನ ಇದ್ರೇ ಎಮ್ಮೆಲ್ಲೇ ಇಲ್ದಿದ್ರೇ ಎಮ್ಮೆ.. - ಎಲ್ಲೇ.. ಅಂತ ಪದೇ ಪದೆ ತಮ್ಮ ಭಾಷಣದಲ್ಲಿ ಶಿವಳ್ಳಿ ಹೇಳುತ್ತಿದ್ದ ಮಾತು. ಮಾತಿಗೆ ನಿಂತ್ರೇ ಶಿವಳ್ಳಿ, ಬಂಗಾರಪ್ಪನವರಂತೆ ಅದ್ಭುತ ಭಾಷಣಕಾರ. ಚತುರ, ತಂತ್ರ- ಪ್ರತಿತಂತ್ರ ಹೆಣೆಯೋದರಲ್ಲೂ ಸಿದ್ಧಹಸ್ತ ರಾಜಕಾರಣಿ. ರಾಜಕಾರಣಿಗೆ ಇರಬೇಕಾದ ಗುಣ- ಅವಗುಣಗಳೆಲ್ಲವೂ ಇದ್ದವು.
ಜಾತಿಯ ಕಾರಣಕ್ಕೆ ಯಾರಿಗೂ ತಾರತಮ್ಯ ಮಾಡಲಿಲ್ಲ :
ಇಡೀ ರಾಜಕೀಯ ಜೀವನದಲ್ಲಿ ಜಾತಿಯ ಕಾರಣಕ್ಕೆ ತಾರತಮ್ಯ ಮಾಡಿರೋದು ಕಡಿಮೆ. ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಅದೇ ಹಳೆಯದಾದ ಮನೆ ಇದೆ. ಅಲ್ಲಿಯೇ ಶಿವಳ್ಳಿ ತಂದೆ-ತಾಯಿ ಜತೆಗೆ ಬಾಳಿ ಬದುಕಿರೋದು. ಈಗಲೂ ಅವರ ಒಬ್ಬ ಸೋದರ ಅದೇ ಮನೆಯಲ್ಲಿದ್ದಾರೆ. ಮೂರು ಸಾರಿ ಶಾಸಕನಾದರೂ ಹಿರಿಯರು ಬಾಳಿದ್ದ ಹರಕುಮುರುಕು ಮನೆಯನ್ನ ಹಾಗೇ ಇಟ್ಕೊಂಡಿದ್ದರು. ಒಂದ್ಕಾಲದಲ್ಲಿ ಶಿವಳ್ಳಿಗೆ ಹೆಣ್ಣು ಕೊಡೋಕು ಹಿಂದೇಟು ಹಾಕಿದ್ರಂತೆ. ಇದರ ಮಧ್ಯೆ ಮಾಜಿ ಸಿಎಂ ಗುರು ಬಂಗಾರಪ್ಪ ಮುಕ್ತಿ ಮಂದಿರದಲ್ಲಿ ನಡೆದಿದ್ದ ಶಿಷ್ಯನ ಮದುವೆಗೆ ಬಂದಿದ್ದರು. 1998ರಲ್ಲಿ ಗ್ರಾಪಂ ಸದಸ್ಯನೂ ಅಲ್ಲದ ಬಡವನ ವಿವಾಹಕ್ಕೆ ಬಂದು ಆಶೀರ್ವದಿಸಿದ್ದರು ಬಂಗಾರಪ್ಪ. ಹಣದ ಜತೆಗೆ ಬಂಗಾರವನ್ನೂ ಶಿಷ್ಯನಿಗೆ ಕೊಟ್ಟಿದ್ರು. ಅದೇ ಕಾರಣಕ್ಕೆ ತಾಲೂಕಿನಲ್ಲಿ ಶಿವಳ್ಳಿ ನಾಯಕನಾಗಿ ಬೆಳೆಯೋಕೆ ಸಾಧ್ಯವಾಯಿತು. ಬಂಗಾರಪ್ಪ ಇರದಿದ್ರೇ ಶಿವಳ್ಳಿ ಮೂರು ಬಾರಿ ಶಾಸಕ, ಸಚಿವನಾಗೋದು ಇರಲಿ ಗ್ರಾಪಂ ಮೆಂಬರ್ ಕೂಡ ಆಗ್ತಿರಲಿಲ್ಲ. ಹಾಗಾಗಿ ಗುರು ಬಂಗಾರದ ಮನುಷ್ಯನನ್ನ ಶಿವಳ್ಳಿ ಪದೇಪದೆ ಸ್ಮರಸಿಕೊಳ್ಳುತ್ತಿದ್ದರು.
ಬಡತನದ ಅವಮಾನಗಳೇ ಬದುಕಿನಲ್ಲಿ ಸಾಧಿಸುವ ಛಲ ತಂದವು :
ಶಿವಳ್ಳಿ ನೋವು, ಹಠ, ಛಲ, ಗುರಿ, ಮಾನವೀಯ ಅಂತಃ ಕರಣವುಳ್ಳ ಮನುಷ್ಯ. ತಾನು ಹಸಿವು ಕಂಡಿದ್ರಿಂದಲೇ ಮನೆಗೆ ಬಂದವರಿಗೇ ಹೊಟ್ಟೆತುಂಬ ಊಟ ಮಾಡಿಸದೇ ಕಳುಹಿಸುತ್ತಿರಲಿಲ್ಲ. ಶಾಸಕನಾಗೋ ಮೊದಲೇ ಇದ್ದ ಬಡತನದಲ್ಲಿನ ನೋವು, ಅವಮಾನ, ಅದನ್ನ ಎದುರಿಸಿ ಭವಿಷ್ಯ ರೂಪಿಸಿಕೊಂಡಿದ್ದು ಇಷ್ಟವಾಗುವ ಗುಣ. ಅಧಿಕಾರ ಸಿಗುವ ಮೊದಲಿದ್ದ ಅವರ ಗುಣ, ಮುಗ್ಧತೆ ಹಾಗೇ ಕಾಪಾಡಿಕೊಂಡ್ರೇ, ಇನ್ನೂ ಇಷ್ಟವಾಗ್ತಾರೆ ಅಂತಾ ಅವರ ಊರಿನ ಜನರೇ ಪದೇಪದೆ ಹೇಳುತ್ತಿದ್ದರು. ಆದರೆ, ರಾಜಕೀಯದಲ್ಲಿ ಆ ರೀತಿ ಇದ್ದು ಸರ್ವೈವ್ ಆಗೋದು ಸುಲಭವಲ್ಲ ಅನ್ನೋದು ಅವರಿಗೆ ಗೊತ್ತಿತ್ತು.
ಸಣ್ಣ ಹಳ್ಳಿಯಿಂದ ಸಚಿವನಾಗುವವರೆಗಿನ ಸಾಧನೆ ಸಣ್ಣದಲ್ಲ :
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ್ದ ಸಿ.ಎಸ್ ಶಿವಳ್ಳಿ 3 ಬಾರಿ ಶಾಸಕನಾಗಿ, ಸಚಿವನಾಗುವರೆಗಿನ ಏಳುಬೀಳು ಕಡಿಮೆಯಿರಲಿಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಸಣ್ಣ ಹಳ್ಳಿಯಲ್ಲಿದ್ದ ವ್ಯಕ್ತಿಯೊಬ್ಬ ಸಚಿವನಾಗುವರೆಗೂ ಸಾಧನೆ ಮಾಡುವಂತೆ ಮಾಡಿತ್ತು. ಪ್ರಜಾಪ್ರಭುತ್ವದ ಸೊಬಗಿಗೆ, ರಾಜಕೀಯ ಹಿನ್ನೆಲೆಯಿರದ ಬಡವ ಶಿವಳ್ಳಿ ಸಚಿವನಾಗಿದ್ದಿರೋದೇ ಉದಾಹರಣೆಯಾಗಿತ್ತು.