ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಮನೆಯಿಂದ ಹೊರ ಬರಲು ಜನ ಹೆದರುತ್ತಿದ್ದಾರೆ. ಈಗಾಗಲೇ ನಾಯಿಗಳ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ.
ಮೊನ್ನೆ ಗ್ರಾಮದ ನಿವಾಸಿ ರೈಮನಸಾಬ ನದಾಫ್ ಮುಂಜಾನೆ ಕೆಲಸಕ್ಕೆ ಹೋಗುತ್ತಿದ್ದಾಗ ಶ್ವಾನಗಳ ದಾಳಿಗೆ ಒಳಗಾದರು. ಪ್ರಸ್ತುತ ಅವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲಾ ವಿದ್ಯಾರ್ಥಿ ತೋಷಿಪ್ ಸೈದಾಪುರ್ಗೆ ನಾಯಿಗಳು ಕಚ್ಚಿವೆ. ಎಲ್ಲಿ ಯಾವ ಕಡೆಯಿಂದ ನಾಯಿಗಳು ದಂಡು ಬಂದು ದಾಳಿ ಮಾಡುತ್ತವೋ ಎಂಬ ಭಯದಲ್ಲಿ ಜೀವನ ನಡೆಸುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೀದಿಗಳಲ್ಲಿ ಸಂಚರಿಸಲು ಹೆದರುತ್ತಿದ್ದಾರೆ. ರೈತರು ಜಮೀನಿಗೆ ಹೋದರೂ ಅಲ್ಲಿಗೂ ನಾಯಿಗಳ ದಂಡು ಬರುತ್ತಿವೆ. ಇದರಿಂದ ಹೊಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ನಾಯಿಗಳಿಂದ ಇಷ್ಟೆಲ್ಲಾ ಆಗುತ್ತಿದ್ದರೂ ಗ್ರಾಮ ಪಂಚಾಯತಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.