ಹುಬ್ಬಳ್ಳಿ: ಹದಿಮೂರು ವರ್ಷಗಳ ಹಿಂದೆ ವಿದ್ಯುತ್ ತಂತಿ ತಗುಲಿ ಎಡಗೈ ಕಳೆದುಕೊಂಡಿದ್ದ ಬಾಲಕಿ ಈಗ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ ಸಾಧಕಿಯಾಗಿ ಬೆರಗುಗೊಳಿಸಿದ್ದಾಳೆ. ಆದರೆ ತಂದೆಯ ಅಕಾಲಿಕ ಮರಣದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕೆಂಬ ಈಕೆಯ ಕನಸು ಕಮರಿ ಹೋಗುತ್ತಿದೆ.
ಹುಬ್ಬಳ್ಳಿಯ ಕಲ್ಮೇಶ್ವರ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಿಲೋಫರ್ ಧಾರವಾಡ ಸುಮಾರು 10 ವರ್ಷ ವಯಸ್ಸಾಗಿದ್ದಾಗ ಮನೆಯ ಮೇಲೆ ಬಟ್ಟೆ ಒಣಗಿಸಲು ಹೋಗಿ ತಮ್ಮ ಕೈ ಕಳೆದುಕೊಂಡಿದ್ದರು. ಇದಷ್ಟೇ ಅಲ್ಲ, ಹೊಟ್ಟೆ ಮತ್ತು ಕಾಲಿಗೂ ಗಂಭೀರ ಗಾಯಗಳಾಗಿತ್ತು. ಆಗಿನಿಂದಲೇ ತನ್ನ ಅಸಹಾಯಕತೆಯನ್ನು ಬೇರೊಬ್ಬರಿಗೆ ತೋರ್ಪಡಿಸಿಕೊಳ್ಳದೇ, ಜಾವೆಲಿನ್ ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರಮಟ್ಟದ ಸಾಧನೆ ಮಾಡಿದರು.
ಕಡು ಬಡತನದಲ್ಲೂ ತಂದೆ ಶಂಶುದ್ದೀನ್ ಧಾರವಾಡ ಹಮಾಲಿ ವೃತ್ತಿ ಮಾಡಿಕೊಂಡು ಮಗಳ ಸಾಧನೆಗೆ ಬೆನ್ನೆಲುಬಾಗಿದ್ದರು. ಆದರೆ ಈಗ ತಂದೆಯ ಅಕಾಲಿಕ ಮರಣದಿಂದ ನಿಲೋಫರ್ ಕನಸಿಗೆ ತಣ್ಣೀರೆರಚಿದಂತಾಗಿದೆ. ಕುಟುಂಬ ನಿರ್ವಹಣೆ ಮಾಡಬೇಕೋ ಅಥವಾ ಕ್ರೀಡೆಯ ಕಡೆ ಮುಖ ಮಾಡಬೇಕೋ ಎಂಬ ಸಂಕಷ್ಟದಲ್ಲಿ ನಿಲೋಫರ್ ಸಿಲುಕಿದ್ದಾರೆ.
ಸ್ಥಳೀಯವಾಗಿ ಹಲವು ಪ್ರಶಸ್ತಿಗಳನ್ನು ಗಳಿಸಿ, ರಾಷ್ಟ್ರಮಟ್ಟದ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ ಮತ್ತು ಗುಂಡು ಎಸೆತದಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ನಿಲೋಫರ್ ಅವರಿಗೆ ಸೂಕ್ತ ನೆರವು ಸಿಕ್ಕರೆ, ಕಂಡ ಕನಸು ನನಸಾಗಲಿದೆ.
ನೀವು ಸಹಾಯ ಮಾಡಬೇಕೆಂದರೆ 8861737430 ಮೊಬೈಲ್ ನಂಬರ್ ಸಂಪರ್ಕಿಸಬಹುದು.
ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ತಯಾರಿ: ವಿಧೇಯಕದಲ್ಲಿ ಏನಿರಲಿದೆ?