ಧಾರವಾಡ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ನೀಡಲಾಗುವ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಧಾರವಾಡದ ಚೆಂಬೆಳಕಿನ ಕವಿ ಚನ್ನವೀರ ಕಣವಿ ಅವರಿಗೆ ನೀಡಿ ಗೌರವಿಸಲಾಯಿತು.
ಧಾರವಾಡದ ಆಲೂರ ವೆಂಕಟರಾವ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಪ್ರಶಸ್ತಿ ನೀಡಿ ಗೌರವಿಸಿದರು.
ಚೆನ್ನವೀರ ಕಣವಿ ಅವರಿಗೆ ಪ್ರಶಸ್ತಿ ಮೊತ್ತ ಏಳು ಲಕ್ಷದ ಒಂದು ರೂಪಾಯಿ ಹಾಗೂ ಮಯೂರ ಸಾಹಿತ್ಯ ಪ್ರಶಸ್ತಿಯನ್ನು ಶ್ರೀಮತಿ ಕೆ. ಆರ್. ಸೌಮ್ಯಾ ಮತ್ತು ಶರಣು ಹುಲ್ಲೂರ ಅವರಿಗೆ ಪ್ರದಾನ ಮಾಡಲಾಯಿತು.
ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರು ಏಳು ಲಕ್ಷದ ಪ್ರಶಸ್ತಿ ಮೊತ್ತವನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅವರು 1 ಲಕ್ಷ ಮೊತ್ತವನ್ನು ಸಿಎಂ ಪರಿಹಾರ ನಿಧಿಗೆ ನೀಡಿದರು. ದೇಣಿಗೆ ಚೆಕ್ಅನ್ನು ಸಚಿವ ಜಗದೀಶ್ ಶೆಟ್ಟರ್ ಮೂಲಕ ಹಸ್ತಾಂತರಿಸಿದರು. ಕಣವಿ ಅವರ ಕಾರ್ಯಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಅಭಿನಂದನೆ ಸಲ್ಲಿಸಿದರು.
ಬಳಿಕ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕಣವಿ ಅವರು ಗುರುವಿನ ಸಮಾನರು. ತುಂಬಿದ ಕೊಡ ತುಳುಕಲ್ಲ. ಅವರ ಆದರ್ಶ ಯುವ ಪೀಳಿಗೆಗೆ ಮಾದರಿಯಾಗಿದೆ. ಬಂದ ಅಧಿಕಾರ, ಅಂತಸ್ತು, ಐಶ್ವರ್ಯ, ಆಯಸ್ಸು ಶಾಶ್ವತವಲ್ಲ. ಜೀವನದಲ್ಲಿ ಸಾಧನೆಯ ಹೆಜ್ಜೆ ಗುರುತು ಉಳಿಸಬೇಕು ಎಂದವರು ಕಣವಿಯವರು ಎಂದು ಗುಣಗಾನ ಮಾಡಿದರು.