ಹುಬ್ಬಳ್ಳಿ: ಆರ್ಥಿಕ ನಷ್ಟದಲ್ಲಿದ್ದ ಸಾರಿಗೆ ನಿಗಮಕ್ಕೆ ಕೋವಿಡ್ - 19 ಬರ ಸಿಡಿಲಾಗಿ ಬಡಿದಿದೆ. ಸಾರಿಗೆ ಇಲಾಖೆ ಬಸ್ಗಳನ್ನ ರಸ್ತೆಗಳಿಸಿದ್ದರೂ, ಸಿಬ್ಬಂದಿ ವೇತನ ನೀಡಲು ಸರ್ಕಾರದ ಬಳಿ ಕೈ ಚಾಚುವ ಸ್ಥಿತಿಯಿದೆ. ಆರ್ಥಿಕ ನಷ್ಟದಿಂದ ಪಾರಾಗಲು ಈ ನಿಗಮ ಈಗ ಒಂದಿಷ್ಟು ಹುದ್ದೆಗಳ ಕಡಿತ ಮತ್ತು ವಿಲೀನ ಮಾಡಲು ಮುಂದಾಗಿದೆ.
ಕೋವಿಡ್ -19, ಹೊಡೆತಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ತತ್ತರಿಸಿ ಹೋಗಿದೆ. ನಿಗಮದ ವ್ಯಾಪ್ತಿಯಲ್ಲಿ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ 26 ಸಾವಿರಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಬಳಿಕ ಬಸ್ಗಳು ರಸ್ತೆಗಳಿದರೂ ಆರ್ಥಿಕ ಹೊರೆ ಮಾತ್ರ ಸರಿ ದಾರಿಗೆ ಬರ್ತಿಲ್ಲ. ಬದಲಾಗಿ ಮತ್ತಷ್ಟು ಹೆಚ್ಚಿನ ನಷ್ಟವಾಗುತ್ತಿದೆ.
ಈ ಆರ್ಥಿಕ ನಷ್ಟವನ್ನ ಸರಿದೂಗಿಸಲು ಈಗ ನಿಗಮ ತನ್ನ ವ್ಯಾಪ್ತಿಯಲ್ಲಿ ಕೆಲವು ಹುದ್ದೆಗಳನ್ನು ಕಡಿತ ಮಾಡುವುದು ಹಾಗೂ ಹಲವು ಹುದ್ದೆಗಳನ್ನು ವಿಲೀನ ಮಾಡಲು ಮುಂದಾಗಿದೆ. ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ. ಎಸ್. ಪಾಟೀಲ್ ಹುದ್ದೆಗಳ ಕಡಿತ ಮಾಡುವುದು ಹಾಗೂ ವಿಲೀನ ಮಾಡುವಂತೆ ಸಾರಿಗೆ ಸಚಿವರಿಗೆ ಪತ್ರ ಬರೆದಿರುವುದು ಇಂತಹ ಚರ್ಚೆಗೆ ಗ್ರಾಸವಾಗಿದೆ.
ಲಾಕ್ಡೌನ್ಗಿಂತ ಮೊದಲು ನಿತ್ಯ 70 ರಿಂದ 80 ಲಕ್ಷ ನಷ್ಟ ಅನುಭವಿಸುತ್ತಿದ್ದ ವಾಯವ್ಯ ಸಾರಿಗೆ ನಿಗಮ ಈಗ ನಿತ್ಯ ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಿದೆ. ಇದನ್ನ ಸರಿದೂಗಿಸಲು, ನಿಗಮದ ವ್ಯಾಪ್ತಿಯಲ್ಲಿ ಬರುವ ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರ ಹುದ್ದೆ ಕಡಿತಗೊಳಿಸುವುದು, ಉಪ ಮುಖ್ಯ ಕಾನೂನು ಅಧಿಕಾರಿ, ಉಪ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಸೇರಿದಂತೆ ಹಲವು ಹುದ್ದೆ ಕಡಿತಗೊಳಿಸುವುದು ಮತ್ತು ಭದ್ರತಾ ಅಧಿಕಾರಿಗಳು, ವಿಭಾಗೀಯ ಕಾರ್ಯ ಅಧೀಕ್ಷಕರು ಸೇರಿದಂತೆ ಹಲವು ಹುದ್ದೆಗಳ ವಿಲೀನಕ್ಕೆ ಪತ್ರ ಬರೆದಿದ್ದಾರೆ.
ಸುಮಾರು 26ಕ್ಕೂ ಹೆಚ್ಚು ಹುದ್ದೆಗಳನ್ನ ಕಡಿತ ಹಾಗೂ ವಿಲೀನ ಮಾಡುವುದರಿಂದ ಸಾಕಷ್ಟು ಆರ್ಥಿಕ ಹೊರೆ ತಪ್ಪಲಿದೆ ಎನ್ನುವುದು ಅಧ್ಯಕ್ಷರ ಲೆಕ್ಕಾಚಾರವಾಗಿದೆ.
ಕೋವಿಡ್ 19 ಹೊಡೆತಕ್ಕೆ ವಾಯುವ್ಯ ಸಾರಿಗೆ ನಿಗಮ ತತ್ತರಿಸಿ ಹೋಗಿದ್ದು, ಆರ್ಥಿಕ ನಷ್ಟ ಸರಿದೂಗಿಸಲು ಸರ್ಕಸ್ ಮಾಡುತ್ತಿರುವ ಹಿರಿಯ ಅಧಿಕಾರಿಗಳು ಹಾಗೂ ನಿಗಮದ ಅಧ್ಯಕ್ಷರು, ಹುದ್ದೆಗಳ ಕಡಿತ ಮತ್ತು ವಿಲೀನಕ್ಕೆ ಸಾರಿಗೆ ಸಚಿವರಿಗೆ ಪತ್ರ ಬರೆದಿರುವುದು ಪರ ಹಾಗೂ ವಿರೋಧದ ಚರ್ಚೆಯನ್ನು ಹುಟ್ಟಿ ಹಾಕಿದೆ.