ಹುಬ್ಬಳ್ಳಿ: ಕೊರೊನಾ ಮಹಾಮರಿಯಿಂದ ವ್ಯಾಪಾರವಿಲ್ಲದೆ ಜೊತೆಗೆ ಬಾಡಿಗೆ ಕಟ್ಟಲಾಗದೇ ಪರದಾಡುತ್ತಿದ್ದ ಹುಬ್ಬಳ್ಳಿ ವಾಯವ್ಯ ಸಾರಿಗೆ ಸಂಸ್ಥೆಯ ಮಳಿಗೆ ಬಾಡಿಗೆದಾರರ ಕಷ್ಟಕ್ಕೆ ಸ್ಪಂದಿಸಿರುವ ಸಾರಿಗೆ ಸಂಸ್ಥೆ ಶೇ.90%ರಷ್ಟು ವಿನಾಯಿತಿ ನೀಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಅಂಗಡಿ ಮುಚ್ಚಲಾಗಿತ್ತು. ಅನ್ಲಾಕ್ ನಂತರವೂ ಪ್ರಯಾಣಿಕರಿಲ್ಲದ ಕಾರಣ ವ್ಯಾಪಾರ,ವಹಿವಾಟು ಹೇಳಿಕೊಳ್ಳುವಷ್ಟು ಇರಲಿಲ್ಲ. ಇದರಿಂದ ಮಾಸಿಕ ಪರವಾನಿಗೆ ಶುಲ್ಕ ಕಟ್ಟಲು ಅಂಗಡಿ ಮಾಲೀಕರು ಪರದಾಡುತ್ತಿದ್ದರು. ಅಲ್ಲದೆ ವಾಯವ್ಯ ಸಾರಿಗೆ ಸಂಸ್ಥೆಗೆ ತಿಂಗಳ ಬಾಡಿಗೆಯಲ್ಲಿ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿ, ತಿಂಗಳ ಬಾಡಿಗೆಯಲ್ಲಿ ಶೇ.90%ರಷ್ಟು ರಿಯಾಯಿತಿ ನೀಡಿದೆ.
ನಗರದ ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ, ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣ, ಕುಂದಗೋಳ, ತಡಸ, ಕಲಘಟಗಿ, ಹೆಬಸೂರು,ಸಂಶಿ, ನವಲಗುಂದ ಮತ್ತು ಅಣ್ಣಿಗೇರಿ ಬಸ್ ನಿಲ್ದಾಣಗಳಲ್ಲಿರುವ ಒಟ್ಟು 88 ವಾಣಿಜ್ಯ ಮಳಿಗೆಗಳಿಗೆ, ಮಾರ್ಚ್ 22ರಿಂದ ಆಗಸ್ಟ್‌ವರೆಗಿನ ತಿಂಗಳವಾರು ವಿನಾಯಿತಿ ಜತೆಗೆ ವಾಯವ್ಯ ಸಾರಿಗೆ ಸಂಸ್ಥೆ ಶೇ.90℅ರಷ್ಟು ವಿನಾಯಿತಿ ನೀಡಿದೆ.
ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿ ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ. ಸಂಪೂರ್ಣ ಬಾಡಿಗೆ ಕಟ್ಟಲಗಾದೇ ಕೆಲವರು ಅಂಗಡಿಗಳನ್ನು ಬಂದ್ ಮಾಡಿಕೊಂಡು ಹೋಗಿದ್ದಾರೆ. ಆರ್ಥಿಕವಾಗಿ ಕುಗ್ಗಿದ್ದ ವ್ಯಾಪಾರದಿಂದಾಗಿ ಮಳಿಗೆಯ ಮಾಲೀಕರಿಗೆ ಸಂಸ್ಥೆ ಬಾಡಿಗೆಯಲ್ಲಿ ವಿನಾಯಿತಿ ನೀಡಿರುವುದರಿಂದ ವಾಣಿಜ್ಯ ಮಳಿಗೆಗಳ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.