ಹುಬ್ಬಳ್ಳಿ: ವಾಣಿಜ್ಯ ನಗರಿಯಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ನಿಯಮಿತವಾಗಿ ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುವವರಿಗೆ ಮತ್ತಷ್ಟು ಆರಾಮದಾಯಕ ಹಾಗೂ ಆಹ್ಲಾದಕರ ಪ್ರಯಾಣದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ಐಷಾರಾಮಿ ವೋಲ್ವೊ ಬಸ್ ಸಂಚಾರವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ವಾ.ಕ.ರ.ಸಾ. ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ.
ಈ ಮೊದಲು ಹುಬ್ಬಳ್ಳಿಯಿಂದ ಬೆಳಗಾವಿ, ಗದಗ, ಬಾಗಲಕೋಟೆ, ವಿಜಯಪುರ ನಡುವೆ ತಡೆರಹಿತ ವೇಗದೂತ ಬಸ್ಗಳು ಸಂಚರಿಸುತ್ತಿದ್ದವು. ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಇತ್ತೀಚೆಗೆ ಹುಬ್ಬಳ್ಳಿಯಿಂದ ಹಾವೇರಿ ಮತ್ತು ರಾಣೆಬೆನ್ನೂರಿಗೆ ತಡೆರಹಿತ ವೇಗದೂತ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಕೆಲ ದಿನಗಳಲ್ಲಿಯೇ ಈ ಬಸ್ಗಳು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿವೆ.
ಸದ್ಯ ಹುಬ್ಬಳ್ಳಿ- ಬೆಳಗಾವಿ ನಡುವೆ ಮಾತ್ರ ವೋಲ್ವೊ ಬಸ್ಗಳು ಸಂಚರಿಸುತ್ತಿವೆ. ಈ ಐಷಾರಾಮಿ ಎಸಿ ಬಸ್ಗಳಲ್ಲಿ 2+2 ಆಸನಗಳಿದ್ದು, ನಿಂತು ಪ್ರಯಾಣಕ್ಕೆ ಅವಕಾಶವಿಲ್ಲ. ಮಾರ್ಗ ಮಧ್ಯದ ಊರುಗಳ ಒಳಗೆ ಹೋಗದೆ, ನೇರವಾಗಿ ಬೈಪಾಸ್ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಪದೇ ಪದೇ ದಾರಿ ಮಧ್ಯದ ಊರುಗಳಲ್ಲಿನ ನಿಲುಗಡೆಗಳು, ಹತ್ತುವ-ಇಳಿಯುವ ಇತರೆ ಪ್ರಯಾಣಿಕರು, ಸಿಗ್ನಲ್ಗಳಲ್ಲಿ ಕಾಯುವಿಕೆ, ಟ್ರಾಫಿಕ್ ಜಾಮ್ ಕಿರಿಕಿರಿ ಇರುವುದಿಲ್ಲ.
ಹುಬ್ಬಳ್ಳಿ-ಬೆಳಗಾವಿ ನಡುವೆ ವೋಲ್ವೊ ಬಸ್ಗಳಲ್ಲಿ ಪ್ರಯಾಣ ಮಾಡವಾಗ ಸ್ವಂತ ಎಸಿ ವಾಹನ ಪ್ರಯಾಣದಲ್ಲಿ ಸಿಗುವಂತಹ ಖಾಸಗಿತನ, ಆರಾಮದಾಯಕ ಮತ್ತು ಅಹ್ಲಾದಕರ ಅನುಭವಾಗುತ್ತದೆ. ಹುಬ್ಬಳ್ಳಿಯಿಂದ ನೆರೆಯ ಜಿಲ್ಲೆಗಳಾದ ಹಾವೇರಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಶಿರಸಿ, ದಾವಣಗೆರೆ ಮತ್ತಿತರ ಪ್ರಮುಖ ಸ್ಥಳಗಳಿಗೆ ಶೀಘ್ರದಲ್ಲಿ 2+2 ಆಸನಗಳ ವೋಲ್ವೊ ಬಸ್ ಸಂಚಾರ ಆರಂಭಿಸುವ ಬಗ್ಗೆ ಕ್ರಮ ವಹಿಸಲಾಗುತ್ತಿದೆ.
ಸಾರ್ವಜನಿಕರ ಅಭಿಪ್ರಾಯ ಪರಿಗಣಿಸಿ ಪ್ರಯಾಣಿಕರಿಗೆ ಅನುಕೂಲಕರ ವೇಳಾಪಟ್ಟಿ ಮತ್ತು ಆಕರ್ಷಕ ಪ್ರಯಾಣ ದರವನ್ನು ನಿಗದಿಪಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದ ಹೇಳಿದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಹುಬ್ಬಳ್ಳಿಯಿಂದ ಗದಗ ಮತ್ತು ಹಾವೇರಿಗೆ ವೋಲ್ವೊ ಬಸ್ಗಳ ಸಂಚಾರವನ್ನು ಆರಂಭಿಸಲಾಗುತ್ತದೆ. ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಇತರೆ ಸ್ಥಳಗಳಿಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ರಾಮನಗೌಡರ ಮಾಹಿತಿ ನೀಡಿದ್ದಾರೆ.