ಹುಬ್ಬಳ್ಳಿ : ಆಕ್ಷೇಪಾರ್ಹ ವಿಡಿಯೋ ಹರಿಬಿಟ್ಟು ಕೋಮುಗಲಭೆಗೆ ಮೂಲವಾಗಿರುವ ಯುವಕ ಅಭಿಷೇಕ ಹಿರೇಮಠನನ್ನು ಹುಬ್ಬಳ್ಳಿಯ ನ್ಯಾಯಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಹಾಜರುಪಡಿಸಲಾಗಿತ್ತು. ಹುಬ್ಬಳ್ಳಿಯ ಜೆ.ಎಂ.ಎಫ್.ಸಿ ಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ನಡೆಸಿದೆ. ಆರೋಪಿಗೆ ಏಪ್ರಿಲ್ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗಲಭೆಗೆ ಕಾರಣವಾಗಿದ್ದ ಅಭಿಷೇಕ್ ಹಿರೇಮಠ್ ಪರವಾಗಿ ಅವರ ವಕೀಲರು ಬೇಲ್ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಾಳೆ ಸರ್ಕಾರಿ ವಕೀಲರಿಂದ ತಕರಾರು ಅರ್ಜಿ ಸಲ್ಲಿಕೆಯಾಗಲಿದೆ. ಅರ್ಜಿ ಸಲ್ಲಿಕೆ ನಂತರ ಜಾಮೀನು ನೀಡಬೇಕಾ, ಬೇಡವಾ ಎಂಬ ಬಗ್ಗೆ ನಿರ್ಧಾರವಾಗುತ್ತದೆ.
ನೂರಕ್ಕೂ ಹೆಚ್ಚು ಜನರ ಬಂಧನ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಇಂದು ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಖಾಕಿ ಪಡೆ ಮತ್ತಷ್ಟು ತನಿಖೆ ಚುರುಕುಗೊಳಿಸಲಿದೆ. ಗಲಾಟೆ ಮಾಡಿ ಪರಾರಿಯಾಗಿದ್ದವರ ಹೆಡೆಮುರಿ ಕಟ್ಟಲು ಪೊಲೀಸರು ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಓದಿ: ಆಕ್ಷೇಪಾರ್ಹ ಪೋಸ್ಟ್ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ
ಸಹಜ ಸ್ಥಿತಿಯತ್ತ ಹುಬ್ಬಳ್ಳಿ: ಶನಿವಾರ ರಾತ್ರಿ ನಡೆದ ಗಲಭೆಯಿಂದಾಗಿ ಹು-ಧಾ ಅವಳಿನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ ಭಾನುವಾರ ಅಂಗಡಿ ಮುಂಗಟ್ಟು ಸೇರಿದಂತೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ಧವು. ಇಂದು ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿದ್ದು, ಎಂದಿನಂತೆ ಬೆಳಗ್ಗೆಯಿಂದ ಯಥಾಸ್ಥಿತಿಯಲ್ಲಿ ಅಂಗಡಿ-ಮುಂಗಟ್ಟು ಆರಂಭವಾಗಿವೆ. ವ್ಯಾಪಾರ-ವಹಿವಾಟು ಸುಗಮವಾಗಿ ನಡೆಯುತ್ತಿದ್ದು, ಸಹಜಸ್ಥತಿಯತ್ತ ಹಳೇ ಹುಬ್ಬಳ್ಳಿ ಮರುಕಳಿಸಿದೆ. ಪೊಲೀಸ್ ಇಲಾಖೆ ಸದ್ಯದ ಪರಿಸ್ಥಿತಿಯನ್ನು ಹತೋಟಿಗೆ ತರಲು ಏ. 20 ರವರೆಗೂ ನಿಷೇಧಾಜ್ಞೆ ಆದೇಶ ಹೊರಡಿಸಿದೆ.