ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಗೆ ಮೂರುಸಾವಿರ ಮಠದ ಆಸ್ತಿ ಪರಭಾರೆ ಮಾಡಿರುವುದಕ್ಕೆ ಸಮಯದಾಯದ ನಾಯಕರು ಈಗ ಜಾಗೃತರಾಗುತ್ತಿದ್ದಾರೆ. ಕೋಟ್ಯಂತರ ರೂ. ಬೆಲೆಬಾಳುವ ಮಠದ ಆಸ್ತಿಯನ್ನು ಮರಳಿ ಪಡೆಯಬೇಕೆಂಬ ಉದ್ದೇಶದಿಂದ ಲಿಂಗಾಯತ ಮುಖಂಡರು ಗೋಕುಲ ರಸ್ತೆಯಲ್ಲಿರುವ ನಾಗರಾಜ ಛಬ್ಬಿ ಅವರ ಕಾರ್ಯಾಲಯದಲ್ಲಿ ವಿಶೇಷ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಮೂರುಸಾವಿರ ಮಠದ ಆಸ್ತಿ ಕೆಎಲ್‌ಇ ಸಂಸ್ಥೆಗೆ ಪರಭಾರೆ ಮಾಡುವುದರಿಂದ ಶ್ರೀಮಠಕ್ಕೆ ಆಗುವ ಒಳಿತಾದರೂ ಏನು ಎಂಬುದರ ಬಗ್ಗೆ ಮುಖಂಡರು ವಿಸ್ತೃತವಾಗಿ ಚರ್ಚಿಸಿದರು. ಶ್ರೀಮಠದ ಆಸ್ತಿ ಉಳಿಸಿಕೊಂಡು ಹೋಗುವುದು ಕೇವಲ ಮಠಾಧಿಪತಿಗಳಿಗೆ ಸೇರಿದ ವಿಷಯ ಮಾತ್ರವಲ್ಲ. ಇದಕ್ಕೆ ಎಲ್ಲ ಭಕ್ತರ ಸಹಕಾರ ಅತ್ಯವಶ್ಯ. ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕೈಂಕರ್ಯಗಳು ದೊಡ್ಡ ಪ್ರಮಾಣದಲ್ಲಿ ನಡೆಯಬೇಕಿದೆ. ಇದಕ್ಕೆ ಶ್ರೀಮಠದ ಆಸ್ತಿಪಾಸ್ತಿಗಳಿಂದ ಸಂದಾಯವಾಗುವ ಹಣದಿಂದ ಈ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅನೇಕರು ಅನಿಸಿಕೆ ವ್ಯಕ್ತಪಡಿಸಿದರು.
ಯಾವುದೇ ಒಂದು ಸಂಸ್ಥೆಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ದಾನದ ರೂಪದಲ್ಲಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕರು ಮುಂದಿಟ್ಟರೆ, ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರೀಮಠದಿಂದ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಬದುಕು ಕಟ್ಟಿಕೊಡುವ ಕೆಲಸ ಮುಂಬರುವ ದಿನಗಳಲ್ಲಿ ಶ್ರೀಮಠದಿಂದ ಮಾಡಬೇಕಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಸದ್ಯ ಕೆಎಲ್‌ಇ ಸಂಸ್ಥೆಗೆ ದಾನದ ರೂಪದಲ್ಲಿ ನೀಡಿರುವ ಕೋಟ್ಯಂತರ ರೂ. ಬೆಲೆಬಾಳುವ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಒತ್ತಾಯಿಸಿದರು.