ಹುಬ್ಬಳ್ಳಿ : ಕೆಸಿಸಿ ಬ್ಯಾಂಕ್ ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಧಾರವಾಡ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ಪ್ರೋತ್ಸಾಹ ಧನ ಚೆಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಕೊರೊನಾ ಹಾವಳಿ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ. ಚೆಕ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದ ಆಶಾ ಕಾರ್ಯಕರ್ತೆಯರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದಾಗಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ಅಲ್ಪ ಸಹಾಯವನ್ನ ಸರ್ಕಾರದಿಂದ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವ ಕುರಿತು ಚರ್ಚೆ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಜಗದೀಶ್ ಶೆಟ್ಟರ್, ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ದೀಪಾ ಚೊಳನ್, ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಇತರರು ಭಾಗಿಯಾಗಿದ್ದರು.