ಹುಬ್ಬಳ್ಳಿ : ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಎರಡನೇ ಡೋಸ್ನ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡರು. ಈ ಹಿಂದೆ ಕೂಡ ಸಚಿವ ಜಗದೀಶ್ ಶೆಟ್ಟರ್ ಕಿಮ್ಸ್ ಆಸ್ಪತ್ರೆಯಲ್ಲಿಯೇ ಮೊದಲ ಡೋಸ್ ಲಸಿಕೆ ಪಡೆದಿದ್ದರು.
ಬಳಿಕ ರಾಜ್ಯದಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ವಿಚಾರವಾಗಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಒಂದೇ ಪರಿಹಾರವಲ್ಲ. ನನ್ನ ಅಭಿಪ್ರಾಯದ ಪ್ರಕಾರ ರಾಜ್ಯದಲ್ಲಿ ಲಾಕ್ಡೌನ್ ಅವಶ್ಯಕತೆಯಿಲ್ಲ.
ಸಾರ್ವಜನಿಕರು ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. ಸಾಮಾಜಿಕ ಅಂತರ ಹಾಗೂ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು ಎಂದ ಅವರು, ಸ್ವಯಂಪ್ರೇರಿತವಾಗಿ ಮುಂಜಾಗ್ರತಾ ಕ್ರಮವಹಿಸಿದರೇ ಕೊರೊನಾ ನಿಯಂತ್ರಣ ಸಾಧ್ಯ ಎಂದು ಸಲಹೆ ನೀಡಿದರು.
ಲಸಿಕೆ ಕೊರತೆ ಬಗ್ಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆಯಿಲ್ಲ. ಕಿಮ್ಸ್ ಹಾಗೂ ಜಿಲ್ಲೆಯಲ್ಲಿ ಲಸಿಕೆ ಸಮರ್ಪಕವಾಗಿ ಲಭ್ಯವಿದೆ. ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಕೊರೊನಾ ನಿಯಂತ್ರಣದಲ್ಲಿ ಸರ್ಕಾರದ ವಿಫಲ ಎಂಬ ಪ್ರತಿಪಕ್ಷಗಳ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳು ಈ ರೀತಿ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ರಚನಾತ್ಮಕ ಸಲಹೆ, ಸೂಚನೆ ನೀಡಬೇಕು. ಅದನ್ನು ಬಿಟ್ಟು ಟೀಕೆ ಮಾಡುವ ಮೂಲಕ ರಾಜಕೀಯ ಮಾಡಬಾರದು ಎಂದು ಗುಡುಗಿದರು.
ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರು ಇಂತಹ ಸಂದರ್ಭದಲ್ಲಿ ಪಟ್ಟು ಹಿಡಿದು ಕುಳಿತುಕೊಳ್ಳುವುದು ಸರಿಯಲ್ಲ. ನೌಕರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲು ಸಿದ್ಧವಿದೆ. ಕೂಡಲೇ ನೌಕರರು ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಬೇಕು.
ಮುಷ್ಕರ ಮುಂದುವರೆಸುವುದರಿಂದ ರಾಜ್ಯದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಪರಿಸ್ಥಿತಿ ಮನಗಂಡು ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಮನವಿ ಮಾಡಿದರು.