ಹುಬ್ಬಳ್ಳಿ: ಜಗತ್ತಿನ ಕಾರ್ಮಿಕರ ಸ್ಫೂರ್ತಿಯ, ಸ್ವಾಭಿಮಾನದ ದಿನ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಇದೇ ಮೇ 1 ರಂದು ಎಲ್ಲ ವಿಭಾಗದ ಕಾರ್ಮಿಕರು, ನೌಕರರು ಮನೆ ಮನೆಯಲ್ಲಿಯೇ ಆಚರಿಸಲು ಸಿಐಟಿಯು ಕರೆ ನೀಡಿದೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಬಹಿರಂಗವಾಗಿ ಕಾರ್ಯಕ್ರಮ ಮೆರವಣಿಗೆ ನಡೆಸಲು ಸಾಧ್ಯವಿಲ್ಲದ ಕಾರಣ ಮನೆಯಲ್ಲಿಯೇ ವೈವಿಧ್ಯಮಯವಾಗಿ ಆಚರಿಸಲಾಗುವುದು. ಮೇ ದಿನ ಶುಭಾಶಯ, ಬೇಡಿಕೆಗಳ ಫಲಕಗಳ ಪ್ರದರ್ಶನ, ಮೇ ದಿನ -2020 ಪ್ರಣಾಳಿಕೆ ಓದುವುದು. ಹೋರಾಟದ ಹಾಡುಗಳನ್ನು ಹಾಡುವುದು ಮುಂತಾದ ಚಟುವಟಿಕೆಗಳನ್ನು ಮನೆಯಲ್ಲಿಯೇ ದೈಹಿಕ ಅಂತರದಿಂದ ಮಾಸ್ಕ್ ಧರಿಸಿ ಮಾಡಲು ಸಂಘಟನೆ ತೀರ್ಮಾನಿಸಿದೆ.
ಮೇ ದಿನ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಮತ್ತು ಯೂಟ್ಯೂಬ್ ಚಾನಲ್ನಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಗಳನ್ನು ವೀಕ್ಷಿಸಲು ಕೋರಲಾಗಿದೆ ಎಂದು ಸಿಐಟಿಯು ಧಾರವಾಡ ಜಿಲ್ಲಾಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.