ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಸಂಜೀವಿನಿಯಾಗಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ (Kims Hospital) ಆವರಣದಲ್ಲಿ ಬರೋಬ್ಬರಿ 27 ಕೋಟಿ ರೂಪಾಯಿ ವೆಚ್ಚದಲ್ಲಿ 400 ಬೆಡ್ಗಳ ಹೆರಿಗೆ ಮತ್ತು ನವಜಾತ ಶಿಶುಗಳ ಆಸ್ಪತ್ರೆಯ ನಿರ್ಮಾಣ ಕಾರ್ಯ ಕಳೆದ ವರ್ಷದಿಂದಲೇ ಆರಂಭವಾಗಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಬಡಜನರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಕನಸಾಗಿಯೇ ಉಳಿದಿದೆ.
ಈ ಆಸ್ಪತ್ರೆ ಆಗಸ್ಟ್ ತಿಂಗಳಲ್ಲೇ ಉದ್ಘಾಟನೆಯಾಗಬೇಕಿತ್ತು. ಆದರೆ ನವೆಂಬರ್ ತಿಂಗಳು ಬಂದರೂ ಇದುವರೆಗೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಅಲ್ಲದೆ ಹಳೆಯ ಕಟ್ಟಡದಲ್ಲಿರುವ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶವನ್ನು ಹೊಂದಲಾಗಿತ್ತು.
ಆದರೆ ಗುತ್ತಿಗೆದಾರರ ಹಾಗೂ ಸರ್ಕಾರದ ನಡುವೆ ನಡೆಯುತ್ತಿರುವ ಅನುದಾನ ತಿಕ್ಕಾಟದ ಹಿನ್ನೆಲೆಯಲ್ಲಿ ಇದುವರೆಗೂ ಈ ಆಸ್ಪತ್ರೆ ಉದ್ಘಾಟನೆಗೆ ಸಜ್ಜಾಗದೇ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ (KIMS Director Ramalingappa Antaratani) ಇಲಾಖೆ ಜೊತೆಗೆ ಮಾತನಾಡಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹು ವರ್ಷಗಳಿಂದಲೂ ಈ ಭಾಗದ ಮಹಿಳೆಯರ ಹಾಗೂ ನವಜಾತ ಶಿಶುಗಳ ಚಿಕಿತ್ಸೆಯ ಉದ್ದೇಶದಿಂದ ನಿರ್ಮಾಣವಾಗಬೇಕಿದ್ದ ಈ ಪ್ರತ್ಯೇಕ ಆಸ್ಪತ್ರೆಯ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಅತೀ ಶೀಘ್ರವೇ ಈ ಆಸ್ಪತ್ರೆ ಪೂರ್ಣ ಪ್ರಮಾಣದ ನಿರ್ಮಾಣ ಹಂತ ಮುಗಿದು ಯಾವುದೇ ಸಮಸ್ಯೆ ಇಲ್ಲದೇ ಈ ಭಾಗದ ಜನರ ಚಿಕಿತ್ಸೆಗೆ ಮುಕ್ತವಾಗಬೇಕು ಅನ್ನೋದೇ ಸಾರ್ವಜನಿಕರ ಆಶಯವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ: ಸ್ವಾಮೀಜಿಗಳ ಭವಿಷ್ಯ