ಹುಬ್ಬಳ್ಳಿ : ರಾಜ್ಯದಲ್ಲಿ ಕೊರೊನಾ ಸೋಂಕಿತ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗುಣಮುಖರಾದ ಮಕ್ಕಳಲ್ಲಿ 2 ರಿಂದ 4 ವಾರಗಳಲ್ಲಿ ಜ್ವರ, ವಾಂತಿ-ಭೇದಿ, ತೂಕ ಏರಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಸೋಂಕಿನಿಂದ ಗುಣಮುಖರಾದ 2 ರಿಂದ 4 ವಾರಗಳಲ್ಲಿ ಮಕ್ಕಳಲ್ಲಿ ಜ್ವರ, ವಾಂತಿ-ಭೇದಿ, ತೂಕ ಏರಿಕೆ, ಚರ್ಮದ ಮೇಲೆ ಕೆಂಪು ಚುಕ್ಕೆ, ಕಣ್ಣು ಕೆಂಪಾಗುವುದು, ಹೃದಯದ ಎಡಭಾಗದ ರಕ್ತನಾಳಗಳಲ್ಲಿ ಬಾವು ಬರುವುದು ಹಾಗೂ ನಿಶಕ್ತಿ ಆಗುತ್ತಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಇದು 2 ರಿಂದ 19 ವಯಸ್ಸಿನ ಗಂಡು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಧಾರವಾಡ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ 20 ಪ್ರಕರಣ ಪತ್ತೆಯಾಗಿವೆ. 20 ಮಕ್ಕಳ ಪೈಕಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಆದರೆ, ಈ ಮೂವರು ಕೊರೊನಾದಿಂದ ಮೃತಪಟ್ಟಿಲ್ಲ. ಬದಲಾಗಿ ಕೋವಿಡ್ ನಂತರ ಕಾಣಿಸಿದ ಜ್ವರ, ವಾಂತಿ-ಭೇದಿ ಹಾಗೂ ದೇಹದ ಕೆಲವು ಭಾಗಗಳಿಗೆ ತೊಂದರೆಯುಂಟಾಗಿ ಸಾವನ್ನಪ್ಪಿದ್ದಾರೆ.
ಕೋವಿಡ್ ನಂತರದ ಈ ಕಾಯಿಲೆಗೆ ಪಿಡಿಯಾಟ್ರಿಕ್ ಇನ್‌ಫ್ಲೇಮೆಟ್ರಿ ಮಲ್ಟಿಸಿಸ್ಟಂ ಸಿಂಡ್ರೋಮ್ (ಪಿಐಎಂಎಸ್-ಟಿಎಸ್) ಹಾಗೂ ಮಲ್ಟಿಸಿಸ್ಟಂ ಇನ್‌ಫ್ಲೇಮೆಟ್ರಿ ಸಿಂಡ್ರೋಮ್ ಚಿಲ್ಡ್ರನ್(ಎಂಐಎಸ್-ಸಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ.
ಈ ಕಾಯಿಲೆಯುಳ್ಳ ಮಕ್ಕಳ ರೋಗನಿರೋಧಕ ಶಕ್ತಿ ಸಮಸ್ಥಿತಿಯಲ್ಲಿರದೇ ಹೆಚ್ಚು ಪರಿಣಾಮಕಾರಿಯಾಗಿ ತನ್ನ ಕಾರ್ಯ ತೋರುತ್ತದೆ. ಇದು ಮಕ್ಕಳ ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ. ಐಜಿಜಿ ಹಾಗೂ ರ್ಯಾಪಿಡ್ ಟೆಸ್ಟ್ನಲ್ಲಿ ಇವರ ವರದಿ ನೆಗೆಟಿವ್ ಇರುತ್ತದೆ. ಆದರೆ, ಆ್ಯಂಟಿಬಾಡಿ ಐಜಿಜಿ ಪರೀಕ್ಷೆಯಲ್ಲಿ ಪಾಸಿಟಿವ್ ಬರುವ ಸಂಭವ ಹೆಚ್ಚು. ಹುಬ್ಬಳ್ಳಿಯ ಕಿಮ್ಸ್ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ 20ರಲ್ಲಿ 15 ಮಕ್ಕಳಿಗೆ ಪಾಸಿಟಿವ್ ಬಂದಿದೆ.
ನವಜಾತ ಶಿಶುಗಳಿಗೆ ಕೋವಿಡ್ ಪರೀಕ್ಷೆ ಮಾಡದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೂಚನೆ ನೀಡಿದೆ. ಆದರೂ ಭಯಪಡುವ ಅಗತ್ಯವಿಲ್ಲ. ಲಕ್ಷಣಗಳು ಕಂಡು ಬಂದ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಇದರಿಂದ ಮಕ್ಕಳ ಜೀವಕ್ಕೆ ಕುತ್ತಾಗುವುದನ್ನು ತಪ್ಪಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.