ಹುಬ್ಬಳ್ಳಿ: ವಾಣಿಜ್ಯ ನಗರಿ ಜನತೆ ಒಂದಲ್ಲಾ ಒಂದು ಮೂಲ ಸೌಕರ್ಯಗಳಿಂದ ಬಳಲುತ್ತಿದ್ದಾರೆ. ಇದೀಗ ಚರಂಡಿ ನೀರು ಮನೆಗೆ ನುಗ್ಗುತ್ತಿದ್ದು, ಈ ಕುರಿತು ಮಾಹಿತಿ ನೀಡದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಿಕೆ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ನಗರದ ವಾರ್ಡ್ ನಂಬರ್ 67 ಕೆ.ಕೆ.ನಗರದ ಮೂರನೇ ಕ್ರಾಸ್‌ನಲ್ಲಿರುವ ಎಂ.ಡಿ ಕಾಲೋನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಚರಂಡಿ ತುಂಬಿ, ಕೊಳಚೆ ನೀರು ಮನೆಗೆ ನುಗುತ್ತಿದೆ. ಚರಂಡಿ ಅವ್ಯವಸ್ಥೆಯ ಕುರಿತು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳ ಸಿಬ್ಬಂದಿ ಕಳುಹಿಸಿ ಅರ್ಧಂಬರ್ಧ ಕಾಮಗಾರಿ ಮಾಡಿ ಹಾಗೇ ಬಿಟ್ಟಿದ್ದಾರೆ. ಇದರಿಂದಾಗಿ ನಿವಾಸಿಗಳು ಪರದಾಡುವಂತಾಗಿದ್ದು, ವಾಸನೆ ತಾಳಲಾರದೇ ಪಾಲಿಕೆ ವಿರುದ್ಧ ಗರಂ ಆಗಿದ್ದಾರೆ.
ಇನ್ನು ಚರಂಡಿ ನೀರು ಮನೆಗೆ ನುಗ್ಗಿದ ಪರಿಣಾಮ ಅಡುಗೆ ಮಾಡಿ ಊಟ ಮಾಡಲು ಸಹ ತೊಂದರೆಯಾಗುತ್ತಿದೆ. ಗಬ್ಬು ವಾಸನೆಯ ಜೊತೆಗೆ ಅರ್ಧಂಬರ್ಧ ಕಾಮಗಾರಿ ಮಾಡಿ ಹಾಗೆಯೇ ಬಿಟ್ಟಿದ್ದರಿಂದ ಮಕ್ಕಳು ಅದರಲ್ಲಿ ಬಿದ್ದರೆ ಏನು ಗತಿ? ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು, ಇಲ್ಲದಿದ್ದರೆ ಸ್ಥಳೀಯರು ಪಾಲಿಕೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ಜೊತೆಗೆ ಮನವಿ ಮಾಡಿದ್ದಾರೆ.