ಹುಬ್ಬಳ್ಳಿ: ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಬಾರ್ ಓಪನ್ ಆಗುತ್ತಿದ್ದಂತೆಯೇ ಖರೀದಿಗೆ ಜನರು ಮುಗಿಬಿದ್ದಿದ್ದರು. ಅಲ್ಲದೆ ದಾಖಲೆಯ ಮದ್ಯ ಮಾರಾಟ ಆಗಿತ್ತು. ಆದರೆ ಈ ಬಾರಿಗೆ ಲಾಕ್‌ಡೌನ್ ಕಾರಣದಿಂದ ಸದ್ಯ ಮದ್ಯದ ಅಂಗಡಿಗಳನ್ನು ತೆರೆಯಲು ದಿನದ 4 ಗಂಟೆ ಮಾತ್ರ ಅವಕಾಶ ಇದ್ದರೂ ಬಿಯರ್ ಮಾರಾಟ ಗಣನೀಯವಾಗಿ ಕುಸಿತ ಕಂಡಿದೆ.
ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ ಮದ್ಯದ ಪಾರ್ಸಲ್ ಸೇವೆಗೆ ಅವಕಾಶ ಇರಲಿಲ್ಲ. ಈ ಬಾರಿ ಅಗತ್ಯ ವಸ್ತುಗಳಿಗೆ ನೀಡಿದ ವಿನಾಯಿತಿ ಪಟ್ಟಿಯಲ್ಲಿ ಮದ್ಯಕ್ಕೂ ಅವಕಾಶ ನೀಡಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ವಿಸ್ಕಿ, ಬ್ರಾಂಡಿ, ರಮ್ ಸೇರಿದಂತೆ ಐಎಂಎಲ್ (ಮದ್ಯ) ಮಾರಾಟದಲ್ಲಿ ಶೇ 50ರಷ್ಟು ಕುಸಿದಿದೆ. ಬಿಯರ್ ಮಾರಾಟದಲ್ಲಿ ಶೇ 60ರಷ್ಟು ಕಡಿಮೆಯಾಗಿದೆ.
2021ರ ಮೇ ತಿಂಗಳಿನಲ್ಲಿ 73,971 ಪೆಟ್ಟಿಗೆಗಳಷ್ಟು ಮದ್ಯ ಮಾರಾಟವಾಗಿದ್ದು, 8,357 ಪೆಟ್ಟಿಗೆಗಳಷ್ಟು ಬಿಯರ್ ಮಾರಾಟವಾಗಿದೆ. 2020ರ ಮೇ ತಿಂಗಳಿನಲ್ಲಿ 1,00897 ಪೆಟ್ಟಿಗೆ ಮದ್ಯ, 26,085 ಪೆಟ್ಟಿಗೆ ಬಿಯರ್ ಮಾರಾಟವಾಗಿತ್ತು. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಬಿಯರ್ ಹೆಚ್ಚು ಮಾರಾಟವಾಗುತ್ತಿತ್ತು. ಅವುಗಳನ್ನು ತೆರೆಯಲು ಅವಕಾಶವಿಲ್ಲದ ಕಾರಣ ಬಿಯರ್ ಮಾರಾಟ ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷದ ಲಾಕ್‌ಡೌನ್ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಳ್ಳಬಟ್ಟಿ, ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಈ ವರ್ಷ ಪ್ರಕರಣಗಳು ಮಾತ್ರ ಕಂಡು ಬಂದಿವೆ. ಹೀಗಿದ್ದರೂ ಮದ್ಯ ಮಾರಾಟ ಕುಸಿದಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: Watch: ಹುಣಸೂರಿನ ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಜ್ಜಿಯ ಬಿಂದಾಸ್ ಡ್ಯಾನ್ಸ್