ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ನವನಗರದ ಕಾನೂನು ವಿಶ್ವವಿದ್ಯಾಲಯದ ಎದುರು ಹಗಲಿರುಳು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. ಮೂರು ಮತ್ತು 5ನೇ ಸೆಮಿಸ್ಟರ್ ಕಾನೂನು ತರಗತಿ ಆರಂಭಿಸಬೇಕು. ಮೊದಲ ಮತ್ತು ಎರಡನೇ ವರ್ಷದ ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಆಕ್ಟೋಬರ್‌ನಲ್ಲಿ ಮುಗಿದು, ಈ ತಿಂಗಳಲ್ಲಿ ಮುಂದಿನ ತರಗತಿಗಳು ಆರಂಭ ಆಗಬೇಕಿತ್ತು. ಆದರೆ, ವಿಶ್ವವಿದ್ಯಾಲಯ ಪರೀಕ್ಷೆ ನಡೆಸದೆ, ಮುಂದಿನ ಸೆಮಿಸ್ಟರ್ ತರಗತಿಯನ್ನೂ ನಡೆಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಕುಲಪತಿ ಈಶ್ವರ ಭಟ್ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಬೇಡಿಕೆ ಈಡೇರುವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.