ಹುಬ್ಬಳ್ಳಿ: ದೆಹಲಿ ರೈತರ ಹೋರಾಟ ಬೆಂಬಲಿಸಿ ಜ.26ರಂದು ಪರ್ಯಾಯ ಗಣರಾಜ್ಯೋತ್ಸವ ಪರೇಡ್ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 52 ದಿನಗಳಿಂದ ದೆಹಲಿಯಲ್ಲಿ ರೈತರು ಹೋರಾಡುತ್ತಿದ್ದಾರೆ. ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇಲ್ಲಿಯವರೆಗೂ ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಪ್ರಜಾಪ್ರಭುತ್ವ ವಿರೋಧಿ ಕೃಷಿ ಕಾಯ್ದೆ ಜಾರಿಗೆ ತರಲಾಗಿದ್ದು, ರೈತರ ಚಳವಳಿ ಹತ್ತಿಕ್ಕಲು ವಾಮಮಾರ್ಗ ಅನುಸರಿಸುತ್ತಿದೆ. ಆದರೆ, ಯಾವುದೇ ವಾಮಮಾರ್ಗಕ್ಕೆ ರೈತರು ಬಗ್ಗುವುದಿಲ್ಲ ಎಂದರು.
ಓದಿ: "ರಾಜ್ಯಕ್ಕೆ ಉದ್ಧವ್ ಠಾಕ್ರೆ ಬಂದ್ರೆ ನೋಡ್ಕೊಳ್ತೇವಿ": ಚಾ.ರಂ. ಶ್ರೀನಿವಾಸಗೌಡ ಎಚ್ಚರಿಕೆ
ಜ.26 ರಂದು ದೇಶದ ಉದ್ದಗಲಕ್ಕೂ ಪರ್ಯಾಯ ಗಣರಾಜ್ಯೋತ್ಸವ ಪರೇಡ್ ಮಾಡಲಾಗುತ್ತಿದೆ. ಅಂದು ಬೆಂಗಳೂರಿನಲ್ಲಿಯೂ ಬೃಹತ್ ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಸಮಿತಿ ಸಭೆ ಕರೆದು ಚರ್ಚಿಸಲಾಗಿದೆ. ಈ ರ‍್ಯಾಲಿಯಲ್ಲಿ 15 ಸಾವಿರಕ್ಕೂ ಹೆಚ್ಚು ವಾಹನಗಳು ಭಾಗಿಯಾಗಲಿದ್ದು, ಎಲ್ಲಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ಬರಲಿವೆ ಎಂದರು.